ಮುಂಬಯಿ : ವಾಯು ಚಂಡಮಾರುತ ತನ್ನ ಪೂರ್ಣಶಕ್ತಿಯೊಂದಿಗೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಿದ್ಧತೆ ನಡೆಸುತ್ತಿರುವಂತೆಯೇ ಮುಂಬಯಿ ಮತ್ತು ನೆರೆಕರೆಯ ಮಹಾರಾಷ್ಟ್ರದ ಕೆಲವು ಕರಾವಳಿ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗಿನಿಂದ ಅತ್ಯಂತ ಪ್ರಬಲ ಗಾಳಿ ಬೀಸುತ್ತಿದೆ.ಪ್ರಕೃತ ವಾಯು ಚಂಡ ಮಾರುತ ಗುಜರಾತ್ ಆಸುಪಾಸಿನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳತ್ತ ಧಾವಿಸುವುದನ್ನು ಮುಂದುವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯು ಚಂಡಮಾರುತ ಅತ್ಯಂತ ಪ್ರಬಲ ಚಂಡಮಾರುತವಾಗಿ ಶಕ್ತಿ ಪಡೆಯುತ್ತಿದ್ದು ಗುರುವಾರ ಬೆಳಗಿನೊಳಗೆ ಗಂಟೆಗೆ 145ರಿಂದ 170 ಕಿ.ಮೀ. ವೇಗವನ್ನು ಪಡೆಯಲಿದೆ ಎಂದು ಐಎಂಡಿ ಹೇಳಿದೆ.
ಅತ್ಯಂತ ವಿನಾಶಕಾರಿ ಫೋನಿ ಚಂಡಮಾರುತ ಒಡಿಶಾದ ಪುರಿ ಕರಾವಳಿಗೆ ಅಪ್ಪಳಿಸುವ ಮುನ್ನ ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮ ಹಾಗು ಸ್ಥಳಾಂತರ, ಕಟ್ಟೆಚ್ಚರದ ಕ್ರಮವನ್ನು ವಹಿಸಲಾಗಿತ್ತೋ ಅದೇ ಮಾದರಿಯ ಕ್ರಮಗಳನ್ನು ಗುಜರಾತ್‍ನಲ್ಲಿ ಈಗಾಗಲೇ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.