ಬಂಟ್ವಾಳ: ಮಂಗಳೂರು ನವದೆಹಲಿ ದುರಂತ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಮುಂಬಯಿಗೆ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರಾದ ಮಹಿಳೆಯೊಬ್ಬರಿಗೆ ಎದುರಾದ ಸಮಸ್ಯೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತರು ಫೇಸ್ಬುಕ್‍ಗೆ ಬರೆದ ಪತ್ರಕ್ಕೆ ತಕ್ಷಣ ಸ್ಪಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ರೈಲ್ವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ.
ನಿನ್ನೆ ಮುಂಜಾನೆ ಕಂಕನಾಡಿ ಜಂಕ್ಷನ್‍ನಿಂದ ಹೊರಟ ದುರಂತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಖಾಯ್ದಿರಿಸಿರುವ ಸೀಟಿನ ಮೇಲೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಪೊಟ್ಟಣಗಳನ್ನು ಇರಿಸಿದ್ದರು. ಕೆಳಗಿನ ಸೀಟಿನ ಮೇಲಿನ ಹಾಸಿಗೆ ಸೀಟು ಸ್ವಲ್ಪ ಮಟ್ಟಿಗೆ ಹಾನಿಗೊಂಡಿದ್ದರಿಂದ ಅದನ್ನು ಬಳಸುವಂತೆ ಇರಲಿಲ್ಲ.
ಸಮಸ್ಯೆಯ ಬಗ್ಗೆ ಆಹಾರ ವಿತರಕ ವಿಭಾಗದ ಸಿಬ್ಬಂದಿಗಳಲ್ಲಿ, ರೈಲ್ವೇ ಸಿಬ್ಬಂದಿಗಳಲ್ಲಿ ದೂರಿಕೊಂಡಿದ್ದರೂ ಯಾವುದೇ ಪರಿಹಾರ ದೊರೆತಿರಲಿಲ್ಲ. ಘಟನೆಯನ್ನು ಗಮನಿಸುತ್ತಿದ್ದ ಸಹ ಪ್ರಯಾಣಿಕರಾದ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹೊನ್ನಯ್ಯ ಕಾಟಿಪಳ್ಳ ಅವರು, ಸಮಸ್ಯೆಯನ್ನು ಸವಿಸ್ತಾರವಾಗಿ ವಿವರಿಸಿದ ಪತ್ರವೊಂದನ್ನು ಫೇಸ್ಬುಕ್‍ನ ತಮ್ಮ ಖಾತೆಗೆ ಅಪ್ಲೋಡ್ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲಾದ ಈ ಪತ್ರ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನ ಸೆಳೆಯಿತು. ಸಮಸ್ಯೆಯ ಬಗ್ಗೆ ತಕ್ಷಣ ಮಾಹಿತಿ ಪಡೆದ ಸಂಸದರು, ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಿಳಾ ಪ್ರಯಾಣಿಕರಿದ್ದ ಬೋಗಿಗೆ ಧಾವಿಸಿದ ಅಧಿಕಾರಿಗಳು ಸೀಟಿನಲ್ಲಿ ಇರಿಸಲಾದ ಆಹಾರ ಪೊಟ್ಟಣಗಳನ್ನು ಸ್ಥಳಾಂತರಿಸಿ, ಮಹಿಳಾ ಪ್ರಯಾಣಿಕರಿಗೆ ಸೀಟಿನ ವ್ಯವಸ್ಥೆ ಕಲ್ಪಿಸಿದರು. ಹಾನಿಗೊಂಡಿದ್ದ ಮೇಲಿನ ಸೀಟನ್ನು ದುರಸ್ತಿ ಮಾಡಲಾಯಿತು. ಸಂಸದರ ಸಕಾಲಿಕ ಕ್ರಮವನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.