‘ಗುಳ್ಟು’ ಅಂತಹ ಉತ್ತಮ ಸಿನಿಮಾ ಮಾಡಿದ್ದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಈಗ ಹೊಸ ಸಿನಿಮಾ ತಯಾರಿ ನಡೆಸಿದ್ದಾರೆ. ಕಳೆದ ಬಾರಿ ಸೈಬರ್ ಕ್ರೈಂ ಆಧಾರಿತ ಚಿತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದ ನಿರ್ದೇಶಕ ಈಗ ರವಿ ಬೆಳಗೆರೆ ಅವರ ಕಾದಂಬರಿಯನ್ನ ಸಿನಿಮಾ ಮಾಡಲು ಹೊರಟಿದ್ದಾರೆ.
ಪತ್ರಕರ್ತ, ಬರಹಗಾರ ರವಿಬೆಳಗೆರೆ ಬರೆದಿರುವ ‘ಒಮರ್ಟಾ’ ಕಾದಂಬರಿ ಈಗ ಸಿನಿಮಾ ಆಗ್ತಿದೆ. ಭೂಗತ ಮಾಫಿಯಾ, ರೌಡಿಸಂ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಪುಸ್ತುಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ರೋಚಕ ಕಥೆಯನ್ನ ತೆರೆಮೇಲೆ ತರುತ್ತಿದ್ದಾರೆ ಯುವ ನಿರ್ದೇಶಕ. ಈ ಸಂಬಂಧ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ರವಿಬೆಳಗೆರೆ ಅವರನ್ನ ಭೇಟಿ ಮಾಡಿ ಅನುಮತಿ ಕೂಡ ಪಡೆದುಕೊಂಡಿದ್ದಾರೆ. ಈ ಹಿಂದೆ ಈ ಪುಸ್ತುಕವನ್ನ ಸಿನಿಮಾ ಮಾಡುವ ಉದ್ದೇಶದಿಂದ ಹಲವು ನಿರ್ದೇಶಕರು ರವಿಬೆಳಗೆರೆ ಅವರನ್ನ ಭೇಟಿ ಮಾಡಿದ್ದರು. ಆದರೆ, ಯಾರಿಗೂ ಅನುಮತಿ ನೀಡಿರಲಿಲ್ಲ.
ಇದೀಗ, ಜರ್ನಾಧನ್ ಚಿಕ್ಕಣ್ಣಗೆ ಆ ಅವಕಾಶ ಸಿಕ್ಕಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಯಾರು ನಾಯಕನಾಗಿ ನಟಿಸುಬಹುದು ಎಂಬ ಕುತೂಹಲವಿತ್ತು. ಧನಂಜಯ್, ಸತೀಶ್ ನೀನಸಾಂ ಅಂತವರು ಹೆಸರು ಕೇಳಿಬರ್ತಿತ್ತು. ಆದ್ರೀಗ ಅಕಿರಾ ಖ್ಯಾತಿ ಅನೀಶ್ ತೇಜೇಶ್ವರ್ ನಾಯಕನಾಗಿ ಅಂತಿಮವಾಗಿದ್ದಾರೆ.
ಬಹುತೇಕ ಗುಳ್ಟು ಸಿನಿಮಾದಲ್ಲಿ ಕೆಲಸ ಮಾಡಿದವರೇ ಇಲ್ಲಿಯೂ ಮುಂದುವರಿಯಲಿದ್ದಾರೆ. ಗುಳ್ಟು ಸಿನಿಮಾ ನಿರ್ಮಾಣ ಮಾಡಿದ್ದ ಪ್ರಶಾಂತ್ ರೆಡ್ಡಿ ಅವರೇ ಬಂಡವಾಳ ಹಾಕಲಿದ್ದಾರೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಉಳಿದಂತೆ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಆಗಸ್ಟ್‍ನಿಂದ ಸಿನಿಮಾ ಆರಂಭವಾಗಲಿದೆ.