ಭಾರೀ ಬಹುಮತದಿಂದ ಅಧಿಕಾರಕ್ಕೇರಿರುವ ವೈ.ಎಸ್.ಆರ್.ಕಾಂಗ್ರೆಸ್ ಮತ್ತು ವಿರೋಧ ಪಕ್ಷ ತೆಲುಗುದೇಶಂ ನಡುವೆ, ಮುಂಗಾರು ಅಧಿವೇಶನದ ಮೊದಲ ದಿನವೇ ವಾಕ್ಸಮರವೇ ನಡೆದು ಹೋಗಿದೆ.
ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ದ ಅಕ್ಷರಷಃ ಕಿಡಿಕಾರಿರುವ ಸಿಎಂ ವೈ ಎಸ್ ಜಗನ್ಮೋಹನ್ ರೆಡ್ಡಿ, ನಾನು ಮನಸ್ಸು ಮಾಡಿದರೆ, ಹಾಲೀ ಅಸೆಂಬ್ಲಿಯಲ್ಲಿ ನಿಮ್ಮ ಪಕ್ಷದ ಶಾಸಕರೇ ಇಲ್ಲದಂತೆ ಮಾಡುತ್ತೇನೆ ಹುಷಾರ್ ಎಂದು ಫಿಲ್ಮೀ ಸ್ಟೈಲಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಾನು ಕಣ್ಣು ಮಿಟುಕಿಸಿದರೆ ಸಾಕು, ನಿಮ್ಮ ಎಲ್ಲಾ 23 ಶಾಸಕರು ನಮ್ಮ ಪಕ್ಷ ಸೇರಲು ತಯಾರಾಗಿದ್ದಾರೆ. ಆ ವಿಚಾರ ನಿಮಗೂ ತಿಳಿದಿದೆ. ಆದರೆ, ನಾನು ನಿಮ್ಮಂತೆ ಬ್ಯಾಕ್ ಡೋರ್ ರಾಜಕೀಯ ಮಾಡುವುದಿಲ್ಲ ಎಂದು ನಾಯ್ಡು ವಿರುದ್ದ ಜಗನ್ ಹರಿಹಾಯ್ದಿದ್ದಾರೆ.
ಎಲ್ಲಾ 23 ಶಾಸಕರನ್ನು ರಾಜೀನಾಮೆ ನೀಡಲು ಹೇಳಿ. ಅವರನ್ನು ಮತ್ತೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ನನ್ನ ಈ ಸವಾಲನ್ನು ಸ್ವೀಕರಿಸುತ್ತೀರಾ ಎಂದು ಜಗನ್, ಚಂದ್ರಬಾಬು ನಾಯ್ಡುಗೆ ಸವಾಲೆಸೆದಿದ್ದಾರೆ.
ತೆಲುಗುದೇಶಂ ಪಕ್ಷದ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಆದರೆ ನಾಯ್ಡು ರೀತಿಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಹಾಗೆ ಮಾಡಿದರೆ, ನನಗೂ ಮತ್ತು ಚಂದ್ರಬಾಬು ನಾಯ್ಡುಗೆ ಇರುವ ವ್ಯತ್ಯಾಸವೇನು ಎಂದು ಜಗನ್ ಲೇವಡಿ ಮಾಡಿದ್ದಾರೆ.