ಬೆಂಗಳೂರು: ಆಧಾರ್ ಜೋಡಣೆ ಕಡ್ಡಾಯ ಹಾಗೂ ಬೆಳೆ ಸಾಲ ಮನ್ನಾ ವ್ಯವಸ್ಥೆ ಸಾಪ್ಟ್ ವೇರ್ ಅಭಿವೃದ್ಧಿಯೊಂದಿಗೆ ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಿಂದ 5, 500 ಕೋಟಿ ತೆರಿಗೆದಾರರ ಹಣ ಉಳಿಯುವ ಸಾಧ್ಯತೆ ಇದೆ.
ಬ್ಯಾಂಕ್ ಖಾತೆ, ಪಡಿತರ ಚೀಟಿ ಹಾಗೂ ಭೂ ಕಂದಾಯ ದಾಖಲೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಹಾಗೂ ಸಾಲ ಮನ್ನಾ ಸಾಪ್ಟ್ ವೇರ್ ನಿಂದಾಗಿ ಸ್ವ ಘೋಷಿತ ರೈತರ ಪರಿಶೀಲನಾ ಪ್ರಕ್ರಿಯೆ ಹಾಗೂ ಬ್ಯಾಂಕ್ ಗಳಿಂದ ಸರಿಯಾದ ರೀತಿಯಲ್ಲಿ ಆಡಿಟ್ ನಡೆಯುತ್ತಿದ್ದು, ಸುಮಾರು 7.8 ಲಕ್ಷ ಪ್ರಕರಣಗಳಲ್ಲಿ ತಪ್ಪು ಮಾಹಿತಿಯನ್ನು ಪತ್ತೆ ಹಚ್ಚಲು ನೆರವಾಗಿದೆ.
ಜೂನ್ ಹಾಗೂ ಜುಲೈ ತಿಂಗಳೊಳಗೆ ಒಂದೇ ಕಂತಿನಲ್ಲಿ ವಾಣಿಜ್ಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಮೊದಲ ಬಾರಿಗೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ 22 ಲಕ್ಷ ಸಾಲದಾರರ ಖಾತೆಗಳು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 19 ಲಕ್ಷ ಸಾಲದಾರರ ಖಾತೆಗಳ ಪಟ್ಟಿಯನ್ನು ಕಳುಹಿಸಲಾಗಿತ್ತು. ಆದರೆ, ಪರಿಶೀಲನೆ ನಂತರ ವಾಣಿಜ್ಯ ಬ್ಯಾಂಕ್‍ಗಳಲ್ಲಿ 16. 3 ಲಕ್ಷ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ 12. 1 ಲಕ್ಷ ಬ್ಯಾಂಕ್ ಖಾತೆದಾರರು ಮಾತ್ರ ಅರ್ಹ ಫಲಾನುಭವಿಗಳು ಎಂಬುದನ್ನು ಪತ್ತೆ ಮಾಡಲಾಗಿದೆ.
ಸಾಲಮನ್ನಾ ಯೋಜನೆಗಾಗಿ ಸಲ್ಲಿಸಲಾಗಿರುವ ದಾಖಲಾತಿಗಳ ಪರಿಶೀಲನೆಯಲ್ಲಿ 1.9 ಲಕ್ಷ ರೈತರು ತಪ್ಪು ಮಾಹಿತಿ ನೀಡಿರುವುದು ಕಂಡುಬಂದಿದ್ದು, ಗ್ರಾಮ ಲೆಕ್ಕಿಗರು ಮನೆಮನೆಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ 1.9 ಲಕ್ಷ ರೈತರು ತಪ್ಪು ಮಾಹಿತಿ ನೀಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಧಾರ್ ಜೋಡಣೆ ಕಡ್ಡಾಯ ಹಾಗೂ ಬೆಳೆ ಸಾಲ ಮನ್ನಾ ವ್ಯವಸ್ಥೆ ಸಾಪ್ಟ್ ವೇರ್ ಅಭಿವೃದ್ಧಿಯೊಂದಿಗೆ ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಿಂದ 5, 500 ಕೋಟಿ ತೆರಿಗೆದಾರರ ಹಣ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.