Wednesday, January 22, 2025
ಸುದ್ದಿ

ಫಿಲೋಮಿನಾದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಸಂಪನ್ನ – ಕಹಳೆ ನ್ಯೂಸ್

ಪುತ್ತೂರು: ಜ್ಞಾನ ಸಂಪಾದನೆಯು ಒಂದು ನಿರಂತರ ಪ್ರಕ್ರಿಯೆ. ಜ್ಞಾನ ಗಳಿಕೆಯ ಹಂಬಲವಿದ್ದಾಗ ಮಾತ್ರ ಜ್ಞಾನಿಯಾಗಲು ಸಾಧ್ಯ. ವಿದ್ಯೆಯ ಸಂಪೂರ್ಣ ಪರಿಣತಿ ಹೊಂದಲು ವಿದ್ಯೆಯನ್ನು ವಿದ್ಯೆಯನ್ನಾಗಿ ಪರಿಗಣಿಸಬೇಕು. ವಿದ್ಯೆಯ ಮೌಲ್ಯವನ್ನು ಹಣದ ಮೂಲಕ ಲೆಕ್ಕಾಚಾರ ಮಾಡುವುದು ಸರಿಯಲ್ಲ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಅವರು ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಜೂನ್ 14ರಂದು ಆಯೋಜಿಸಲಾದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ನಡೆಸಲಾದ ಐದನೆಯ ವರ್ಷದ ಹತ್ತು ದಿನಗಳ ಅವಧಿಯ ಉಚಿತ ಕಂಪ್ಯೂಟರ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಣ ಸಂಸ್ಥೆಗಳು ಯಾವುದೇ ಜಾತಿ, ಮತ, ಧರ್ಮ, ಪಂಗಡಗಳ ಸಂಕುಚಿತ ಮನೋಭಾವನೆಗಳಿಗೆ ಸೀಮಿತಗೊಳ್ಳದೆ ಎಲ್ಲಾ ವರ್ಗದ ಜನರನ್ನು ಒಂದೇ ಚಿತ್ತದಿಂದ ಪರಿಗಣಿಸಿದಾಗ ಸಮಾಜದಲ್ಲಿ ಸಾರ್ಥಕತೆಯನ್ನು ಹೊಂದುತ್ತವೆ. ಸಂಸ್ಥೆಯ ಬೆಳವಣಿಗೆಯಲ್ಲಿ ಒಳ್ಳೆಯ ಮನಸ್ಸಿನ ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರು, ಹಿರಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಪಡೆದ ಫಲಾನುಭವಿಗಳು ಸಂಸ್ಥೆಯ ಕುರಿತು ಆಡುವ ಅಭಿಮಾನದ ಮಾತುಗಳೇ ಶ್ರೇಷ್ಠ ಮಟ್ಟದ ಗುರುದಕ್ಷಿಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಕಲಿಕೆಗೆ ಕೊನೆಯೆಂಬುದಿಲ್ಲ. ಹುಟ್ಟಿನಿಂದ ಆದಿಯಾಗಿ ಸಾವಿನ ತನಕವೂ ಕಲಿಕೆಯೆಂಬುದು ನಿರಂತರ ನಡೆಯುತ್ತದೆ. ಕಲಿಕೆಯ ಸಂದರ್ಭದಲ್ಲಿ ತಾಳ್ಮೆ ಅತಿ ಅಗತ್ಯ. ಇದು ಕಲಿಯುವವರಿಗೂ ಬೇಕು, ಕಲಿಸುವವರಿಗೂ ಬೇಕು. ಕಲಿಕೆಗೆ ಆಸಕ್ತಿಯೂ ಬಹಳ ಮುಖ್ಯ. ಜೀವನದ ವಿವಿಧ ಕಾಲಘಟ್ಟದಲ್ಲಿ ಆಸಕ್ತಿಯ ಮಟ್ಟವೂ ಬದಲಾಗುತ್ತದೆ. ಶಿಕ್ಷಣವನ್ನು ನೀಡಿದ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಉತ್ತಮ ಸಂದೇಶವನ್ನು ನೀಡುವ ಮನೋಗುಣ ನಮ್ಮಲ್ಲಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಕ ವಿಜ್ಞಾನ ವಿಭಾಗದ ಸಂಯೋಜಕ ಗೋವಿಂದ ಪ್ರಕಾಶ್ ಮಾತನಾಡಿ, ಸೀಮಿತ ಅವಧಿಯಲ್ಲಿ ಉಪಯುಕ್ತವಾದ ಕಂಪ್ಯೂಟರ್ ಜ್ಞಾನವನ್ನು ಆಸಕ್ತ ಸಾರ್ವಜನಿಕರಿಗೆ ನೀಡುವ ಕಾಯಕವು ಇಲ್ಲಿ ನಡೆದಿದೆ. ಗಳಿಸಿದ ಜ್ಞಾನವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು. ಆಗ ಪ್ರಯತ್ನವು ಸಫಲತೆಯನ್ನು ಹೊಂದುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷತಾ ಬಿ ಮತ್ತು ರಮ್ಯ ಎಸ್ ಉಪಸ್ಥಿತರಿದ್ದರು.
ಶಿಬಿರದಲ್ಲಿ 33 ಮಂದಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಪ್ರಪುಲ್ಲ ಕೆ ಮತ್ತು ಲೋಹಿತ್ ಬಂಟ್ವಾಳ ಇವರು ಶಿಬಿರದ ಕುರಿತು ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.

ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ನಮಿಶಾ ಎಸ್ ರಾವ್ ಮತ್ತು ಬಳಗದವರು ಪ್ರಾರ್ಥಿಸಿದರು. ಸುಶ್ಮಿತಾ ನಾಯಕ್ ಸ್ವಾಗತಿಸಿ, ರಮ್ಯ ಕೆ ಎಮ್ ವಂದಿಸಿದರು. ಪ್ರೀತಿ ರಾವ್ ಕಾರ್ಯಕ್ರಮ ನಿರೂಪಿಸಿದರು.