ಪುತ್ತೂರು: ಕರ್ನಾಟಕ ಸರಕಾರದ ವಿಷನ್ ಗ್ರೂಫ್ ಆಫ್ ಸಾಯನ್ಸ್ ಅಂಡ್ ಟೆಕ್ನಾಲಜಿ, ಐಟಿ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ವಿಭಾಗಗಳ ಅಭಿವೃದ್ದಿಗೆ ನೀಡುವ 2018-19ರ ಸಾಲಿನ ಪ್ರತಿಷ್ಠಿತ ಅನುದಾನವಾದ ರೂ. 30 ಲಕ್ಷವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಪಿ. ರಾಧಾಕೃಷ್ಣ ಹಾಗೂ ರೂ. 20 ಲಕ್ಷವನ್ನು ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಇವರಿಗೆ ಮಂಜೂರುಗೊಳಿಸಿದೆ.
ಭಾರತ ರತ್ನ ಪ್ರೊ. ಸಿ. ಎನ್ ಆರ್ ರಾವ್ ಅಧ್ಯಕ್ಷರಾಗಿರುವ ವಿಷನ್ ಗ್ರೂಪ್ ಪ್ರತಿ ವರ್ಷ ವಿಜ್ಞಾನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆಯನ್ನು ಮಾಡಿದ ಸಂಶೋಧಕರನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡಿ ಗೌರವಿಸುವುದರೊಂದಿಗೆ ವಿಶೇಷ ಅನುದಾನವನ್ನೂ ನೀಡುತ್ತದೆ. ವಿಜ್ಞಾನ ಅಂಕಣಕಾರ ಡಾ. ಎ. ಪಿ. ರಾಧಾಕೃಷ್ಣ ಅವರ ಸಂಶೋಧನೆ ಮತ್ತು ಸಾಧನೆಯನ್ನು ಗುರುತಿಸಿ, ಬೋಧನೆ ಮತ್ತು ಸಂಶೋಧನೆಗೆ ಒತ್ತು ನೀಡುವ ಉದ್ದೇಶದಿಂದ ವಿಭಾಗದ ಸವಲತ್ತುಗಳ ಅಭಿವೃದ್ಧಿಗೆ ಈ ಮೊತ್ತವು ಮಂಜೂರುಗೊಂಡಿರುತ್ತದೆ. ಇವರ ಈ ಯೋಜನೆಗೆ ಮಂಗಳೂರು ವಿವಿಯ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಇನ್ ಎನ್ವಾಯರ್ನ್ಮೆಂಟಲ್ ರೇಡಿಯೋ ಅಕ್ಟಿವಿಟಿ (ಕೆರಾರ್) ಇದರ ಮುಖ್ಯಸ್ಥ ಹಾಗೂ ವಿಕಿರಣ ಭೌತಶಾಸ್ತ್ರ ಸಂಶೋಧಕರಾಗಿರುವ ಪ್ರೊ. ಕರುಣಾಕರ ಎನ್ ಸಹಯೋಗಿಯಾಗಿರುತ್ತಾರೆ. ಸೈದ್ಧಾಂತಿಕ ಭೌತ ವಿಜ್ಞಾನಿಯಾಗಿರುವ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಇವರಿಗೆ ಸೈದ್ಧಾಂತಿಕ ಅಣು ಮತ್ತು ಕಣ ಭೌತ ವಿಜ್ಞಾನ ಕ್ಷೇತ್ರದಲ್ಲಿ ವಿಭಾಗವನ್ನು ಉನ್ನತೀಕರಿಸಲು ಈ ಅನುದಾನವು ಲಭಿಸಿರುತ್ತದೆ. ಇವರ ಈ ಯೋಜನೆಗೆ ಮಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಬಿ. ವಿಜಯ ಕುಮಾರ್ ಸಹಯೋಗಿಯಾಗಿರುತ್ತಾರೆ.
ಕರ್ನಾಟಕ ಸರಕಾರದ ವಿಷನ್ ಗ್ರೂಪ್ ವತಿಯಿಂದ ನೀಡಲಾಗುವ ಈ ವಿಶೇಷ ಅನುದಾನವು ಕಾಲೇಜಿನ ಒಂದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಸಂಶೋಧಕ, ಪ್ರಾಧ್ಯಾಪಕರಿಗೆ ಲಭಿಸಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದ್ದು, ಸಂಚಾಲಕ ವಂ. ಆಲ್ಫ್ರೆಡ್ ಜೆ. ಪಿಂಟೊ ಮತ್ತು ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.