ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಉಗ್ರರ ಜೊತೆಗೆ ನಂಟು ಹೊಂದಿದ್ದರು ಎಂಬ ಶಂಕೆಯ ಮೇರೆಗೆ ಕಳೆದ ವಾರ ತಮಿಳುನಾಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದ ಮೂವರು ಉಗ್ರರು ದಕ್ಷಿಣ ಭಾರತದ ಪ್ರಮುಖ ದೇಗುಲಗಳು ಮತ್ತು ಚರ್ಚ್‍ಗಳ ಮೇಲೆ ದಾಳಿ ನಡೆಸುವ ಯೋಜನೆ ಹೊಂದಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಸ್ಫೋಟದ ಸಂಚು ಇನ್ನೂ ಯೋಜನೆಯ ರೂಪದಲ್ಲೇ ಇತ್ತು. ಅಷ್ಟೇ ಅಲ್ಲ, ಇದಕ್ಕೆ ಅಗತ್ಯವಿರುವವರನ್ನು ನೇಮಕ ಮಾಡುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಐಸಿಸ್‍ಗೆ ಸಂಬಂಧಿಸಿದ ಕೈಪಿಡಿಗಳನ್ನು ಇವರು ತಮಿಳಿಗೆ ಅನುವಾದ ಮಾಡುತ್ತಿದ್ದರು. ಇದನ್ನು ಬಳಸಿ ಯುವಕರನ್ನು ಮನವೊಲಿಸಲಾಗುತ್ತಿತ್ತು.
ಪೊಲೀಸರು ಈ ವಿವರಗಳನ್ನು ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ. ಕಳೆದ ವಾರವೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಏಳು ಕಡೆಗಳಲ್ಲಿ ಶೋಧ ನಡೆಸಿತ್ತು. ಅಲ್ಲದೆ ಶ್ರೀಲಂಕಾ ಸ್ಫೋಟದ ಸಂಚುಕೋರ ಝಹ್ರನ್ ಹಶೀಮ್‍ಗೆ ಸ್ನೇಹಿತನಾಗಿದ್ದ ಮೊಹಮದ್ ಅಜರುದ್ದೀನ್ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿತ್ತು.