ಲೋಕಸಭೆಯಲ್ಲಿ ಸಂಸದರ ಪ್ರಮಾಣವಚನ ಕಾರ್ಯಕ್ರಮ ಘೋಷಣೆ ಕೂಗಿದ್ದರಿಂದ ವಿವಾದಕ್ಕೆ ಕಾರಣವಾಯಿತು. ಪ್ರಮಾಣವಚನದ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಅನವಶ್ಯಕವಾಗಿ ಪ್ರತಿಪಕ್ಷ ಸದಸ್ಯರ ಕಾಲೆಳೆದು, ಘೋಷಣೆ ಕೂಗಿ ಕಾರ್ಯಕ್ರಮದ ಗಾಂಭೀರ್ಯಕ್ಕೆ ಚ್ಯುತಿ ತರುವ ಕೆಲಸ ಮಾಡಿದರು.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಮಾಣವಚನದ ಸಂದರ್ಭದಲ್ಲಿ ‘ಜೈ ಶ್ರೀರಾಮ್ ಹಾಗೂ ‘ವಂದೇ ಮಾತರಂ’ ಘೋಷಣೆಯನ್ನು ಬಿಜೆಪಿ ಸಂಸದರು ಕೂಗಿದರು. ಪ್ರಮಾಣವಚನ ಅಂತ್ಯಕ್ಕೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಓವೈಸಿ, ‘ಜೈ ಭೀಮ್, ಅಲ್ಲಾ ಹೂ ಅಕ್ಬರ್, ಜೈ ಹಿಂದ್ ಎಂದು ಘೋಷಣೆ ಕೂಗಿದರು.
ಇದಾದ ಬಳಿಕ ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಪ್ರಮಾಣವಚನ ಸ್ವೀಕರಿಸುವ ಮೊದಲು ಮಾತನಾಡಿ, ‘ವಂದೇ ಮಾತರಂ ಘೋಷಣೆ ಕೂಗುವುದು ಇಸ್ಲಾಂ ವಿರೋಧಿ’ ಎಂದು ವಿವಾದಾತ್ಮಕ ಹೇಳಿಕೆಯನ್ನು ಸಂಸತ್‍ನಲ್ಲೇ ನೀಡಿದರು.
ಇದಾದ ಬಳಿಕ ಬಿಜೆಪಿಯ ಸಾಕ್ಷಿ ಮಹಾರಾಜ್ ಪ್ರಮಾಣವಚನಕ್ಕೆ ಮುಂದಾದಾಗ , ‘ಮಂದಿರವನ್ನು ಅಲ್ಲೇ ನಿರ್ಮಿಸುತ್ತೇವೆ ಎಂದು ಬಿಜೆಪಿ ಸಂಸದರು ಘೋಷಣೆ ಕೂಗಿದರು. ಇವೆಲ್ಲ ಘಟನೆಗಳಿಂದ ಸದನದಲ್ಲಿ ಕೆಲ ಕ್ಷಣ ಮುಜುಗರದ ವಾತಾವರಣ ಸೃಷ್ಟಿಯಾಗಿತ್ತು. ಆಡಳಿತ ಪಕ್ಷದವರ ಈ ವರ್ತನೆಗೆ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು.