Monday, November 25, 2024
ಸುದ್ದಿ

ವಿವೇಕಾನಂದ ಕಾಲೇಜು: ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ: ಹೆತ್ತವರು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ: ಸೂರ್ಯನಾರಾಯಣ ರಾವ್ – ಕಹಳೆ ನ್ಯೂಸ್

ಪುತ್ತೂರು: ಹೆತ್ತವರ ಒತ್ತಡದ ಜೀವನ ಕ್ರಮವು ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದೆ. ಇದನ್ನು ತಪ್ಪಿಸಲು ಹೆತ್ತವರು ಆದಷ್ಟು ಸಮಯವನ್ನು ಮಕ್ಕಳಿಗೋಸ್ಕರ ಮೀಸಲಿಡುವಂತೆ ಆಗಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕಾ ಜೀವನದಲ್ಲಿ ವಿದ್ಯೆಯ ಕಡೆಗೆ ಹೆಚ್ಚು ಒತ್ತನ್ನು ನೀಡುವಂತೆ ಹೆತ್ತವರು ಪೂರಕ ವಾತಾವರಣವನ್ನು ಸೃಷ್ಟಿಸಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯನಾರಾಯಣ ರಾವ್ ಅಭಿಪ್ರಾಯಪಟ್ಟರು.

ಅವರು ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ಬುಧವಾರ ರಕ್ಷಕ-ಶಿಕ್ಷಕ ಸಂಘದ ಸಹಯೋಗದಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳು ಸಣ್ಣ ವಯಸ್ಸಿನಲ್ಲಿ ತಮ್ಮ ಹೆತ್ತವರ ಹೆಸರಿನಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಮುಂದೆ ಹೆತ್ತವರು ತಮ್ಮ ಮಕ್ಕಳ ಹೆಸರಿನಿಂದ ಗುರುತಿಸಿಕೊಳ್ಳುವಂತಾಗಬೇಕು ಎಂದರಲ್ಲದೆ, ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ತಮ್ಮ ಹೆತ್ತವರ ವ್ಯವಹಾರದ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಆ ಕ್ಷೇತ್ರದಲ್ಲೂ ಜೀವನವನ್ನು ಮುಂದುವರೆಸುವಂತಾಗಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಹೆತ್ತವರು ತಮ್ಮ ಮಕ್ಕಳ ಮೇಲಿನ ಅತೀವ ಪ್ರೀತಿಯಿಂದ ಪ್ರಾಪಂಚಿಕ ಸುಖವನ್ನು ನೀಡುತ್ತಿದ್ದಾರೆ. ಆದರೆ ಅದು ಅವರ ಜೀವನಕ್ಕೆ ಪ್ರಯೋಜನವನ್ನು ನೀಡುತ್ತಿದೆಯೇ ಎಂದು ಅರಿತು ವ್ಯವಸ್ಥೆಯನ್ನು ನೀಡಬೇಕು ಎಂದು ಹೆತ್ತವರಿಗೆ ಕಿವಿಮಾತನಾಡಿದರು.

ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಜಾಹ್ನವಿ ಕಾಂಚೋಡು ಮಾತನಾಡಿ, ವಿದ್ಯಾರ್ಥಿಗಳು ದೃಢ ಸಂಕಲ್ಪದ ಮೂಲಕ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ಹಾಗಾಗಿ ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಬೇಡಿಕೆಯನ್ನು ಅರಿತು ಪೋಷಕರು ಅದನ್ನು ಅವಲೋಕಿಸಿ ಅದನ್ನು ನೀಡಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್ ಮಾತನಾಡಿ, ಪೋಷಕರು ತಮ್ಮ ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ದಾರಿತಪ್ಪುವುದನ್ನು ತಪ್ಪಿಸಬಹುದು ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ, ಸರ್ವತೋಮುಖ ಬೆಳವಣಿಗೆಗೆ ಇಲ್ಲಿ ಅವಕಾಶವಿದೆ. ಈ ಕಾಲೇಜು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಬದಲಾಗಿ ಸಮಾಜದ್ದು. ಈ ಹಿನ್ನೆಲೆಯಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿ ಉತ್ತಮ ಪ್ರಜೆಯಾಗಿ ಕಾಲೇಜಿಗೆ ಕೀರ್ತಿ ತರುವಂತಾಗಬೇಕು ಎಂದು ಶುಭಹಾರೈಸಿದರು.

ಪ್ರತಿಭಾ ಪುರಸ್ಕಾರ
ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳಿಗೆ ಸೇರ್ಪಡೆಯಾದ 38 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಹೆತ್ತವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನಡೆಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್, ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಸುಬ್ರಹ್ಮಣ್ಯ ಭಟ್, ರವೀಂದ್ರನಾಥ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಜಾಹ್ನವಿ, ಶ್ರೀರಾಗ, ಕೀರ್ತಿ ಪ್ರಾರ್ಥಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಂಕರನಾರಾಯಣ ಭಟ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಿಷ್ಣು ಕುಮಾರ್ ವಂದಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕಿ ವಿಜಯಲಕ್ಷ್ಮೀ, ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿಕೊಂಡಿದ್ದಾರೆ. ಈ ಬೆಳವಣಿಗೆ ತಲೆಮಾರುಗಳಿಂದ ತಲೆಮಾರಿಗೆ ಮುಂದುವರಿಯುತ್ತಿರುವುದು ಸಂತೋಷದ ವಿಷಯ. ಇದಕ್ಕೆ ಪೂರಕವೆಂಬಂತೆ ಕಾಲೇಜಿನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಇದರ ಜೊತೆಗೆ ನ್ಯಾಕ್, ಯುಜಿಸಿಯಂತಹ ಶಿಕ್ಷಣ ಇಲಾಖೆಗಳು ಗ್ರೇಡ್ ನೀಡಿರುವುದು ಕಾಲೇಜಿಗೆ ಮತ್ತಷ್ಟು ಹಿರಿಮೆಯನ್ನು ತಂದಿದೆ.
– ಡಾ. ಪೀಟರ್‍ವಿಲ್ಸನ್ ಪ್ರಭಾಕರ್, ಪ್ರಾಂಶುಪಾಲರು, ವಿವೇಕಾನಂದ ಕಾಲೇಜು ಪುತ್ತೂರು.