2019ರ ಕೋಸ್ಟಲ್‍ವುಡ್ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಇನ್ನು ಕೆಲವು ದಿನಗಳಲ್ಲಿ ಶತ ದಿನ ಪೂರೈಸಲಿದೆ.
ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು, ಸಖತ್ ರೆಸ್ಪಾನ್ಸ್ ನೀಡಿದ್ದಾರೆ. ಭಾರೀ ದಿನಗಳ ನಂತರ ತುಳುವಿನ ಒಂದು ಸಿನೆಮಾ 100ರ ಗಡಿಯತ್ತ ಸಾಗುತ್ತಿರುವುದು ಕೋಸ್ಟಲ್‍ವುಡ್‍ನ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ವಿಶೇಷವೆಂದರೆ ಈ ವರ್ಷ ಬಿಡುಗಡೆಯಾದ ಸಿನೆಮಾಗಳ ಪೈಕಿ ಗರಿಷ್ಠ ದಿನಗಳ ಪ್ರದರ್ಶನ ಕಂಡ ಸಿನೆಮಾ ಇದು ಎಂಬ ಹೆಗ್ಗಳಿಕೆಯನ್ನು ಕೂಡ ಪಡೆಯಲಿದೆ.
ಮಾತ್ರವಲ್ಲದೆ ಕಳೆದ ವರ್ಷ ತೆರೆಕಂಡಿದ್ದ ‘ಅಪ್ಪೆ ಟೀಚರ್’ ಚಿತ್ರವೇ ತುಳುವಿನಲ್ಲಿ ಕೊನೆಯದಾಗಿ ಶತ ದಿನ ಪೂರೈಸಿದ ಚಿತ್ರ ಎಂಬುದು ನಾವು ಗಮನಿಸಬೇಕಾದ ಸಂಗತಿ.
ಮಾ. 29ರಂದು ತುಳುನಾಡಿನಾದ್ಯಂತ ಈ ಚಿತ್ರ ಬಿಡುಗಡೆಗೊಂಡಿತ್ತು. ರಾಜೇಶ್ ಬ್ರಹ್ಮಾವರ ಚಿತ್ರ ನಿರ್ಮಿಸಿದ್ದಾರೆ. ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಯಜ್ಞೇಶ್ವರ ಬರ್ಕೆ ಕಟ್ಟಪ್ಪನಾಗಿ ಕಾಣಿಸಿಕೊಂಡಿದ್ದು, ಚರಿಷ್ಮಾ ಸಾಲ್ಯಾನ್ ಎಂಬ ಕಲಾವಿದೆ ಈ ಚಿತ್ರದ ಮೂಲಕ ಕೋಸ್ಟಲ್‍ವುಡ್‍ಗೆ ಎಂಟ್ರಿಯಾಗಿದ್ದಾರೆ. ಖ್ಯಾತ ನಿರ್ದೇಶಕ ರಂಗ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್ ಈ ಸಿನೆಮಾದ ಮೂಲಕ ನಟರಾಗಿ ಕೋಸ್ಟಲ್‍ವುಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ.