ಚಿಲಕ ಮುರಿದು 3 ಕಿಂಟ್ವಾಲ್ ಸುಲಿದ ಅಡಿಕೆ ಕಳವು : ಮಂಚಿ ಗ್ರಾಮದ ಮೊಂತಿಮಾರುಪಡ್ಪುವಿನಲ್ಲಿ ಘಟನೆ – ಕಹಳೆ ನ್ಯೂಸ್
ಮನೆಯ ಚಿಲಕ ಮುರಿದು ಸುಲಿದಿರುವ ಅಡಿಕೆ ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಮೊಂತಿಮಾರುಪಡ್ಪು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮೊಂತಿಮಾರುಪಡ್ಪು ನಿವಾಸಿ ಮೊಯಿದ್ದೀನ್ ಎಂಬವರ ಹಳೆಯ ಮನೆಯಿಂದ ಸುಲಿದಿರುವ ಸುಮಾರು 3 ಕಿಂಟ್ವಾಲ್ ಅಡಿಕೆ ಕಳವುಗೈದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಯಿದ್ದೀನ್ ಅವರು ಅಡಿಕೆ ಲೀಸ್ ಪಡೆಯುವ ವ್ಯಾಪಾರಿಯಾಗಿದ್ದಾರೆ. ಹಾಗೆ ಲೀಸ್‍ಗೆ ಪಡೆದ ಅಡಿಕೆಯನ್ನು ಮನೆಯ ಹತ್ತಿರ ಇರುವ ಹಳೆಯ ಮನೆಯಂಗಳದಲ್ಲಿ ಒಣಗಿಸಿ ಅದೇ ಮನೆಯಲ್ಲಿ ದಾಸ್ತಾನು ಇರಿಸುತ್ತಾರೆ. ದಾಸ್ತಾನು ಇರಿಸಿದ ಒಣ ಅಡಿಕೆಯನ್ನು ಹಳೆಯ ಮನೆಯಲ್ಲಿ ಸುಲಿಯುತ್ತಿದ್ದರು. ನಿನ್ನೆ ಕೂಡಾ ಅಡಿಕೆ ಸುಲಿಯುವ ಕೆಲಸಗಾರರು ಬಂದು ಸುಮಾರು 9 ಗೋಣಿ ಚೀಲ ಅಡಕೆ ಸುಳಿದು ಹೋಗಿದ್ದರು. ಮನೆಯವರು ಅಡಿಕೆಯನ್ನು ಅಲ್ಲಿಯೇ ಇಟ್ಟು ಮನೆಗೆ ಬೀಗ ಹಾಕಿ ಹೋಗಿದ್ದರು. ಇಂದು ಬೆಳಿಗ್ಗೆ ಮತ್ತೆ ಅಡಿಕೆ ಸುಲಿಯಲು ಎಂದು ಕೆಲಸಗಾರರೊಂದಿಗೆ ಹಳೆ ಮನೆಗೆ ಬಂದು ನೋಡಿದಾಗ ಚಿಲಕ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ 9 ಗೋಣಿ ಸುಳಿದ ಅಡಿಕೆ ಗೋಣಿ ಚೀಲದಲ್ಲಿ ಕೇವಲ 3 ಗೋಣಿಗಳು ಮಾತ್ರ ಇತ್ತು. ಉಳಿದ 6 ಗೋಣಿ ಚೀಲಗಳು ಸುಮಾರು 3 ಕಿಂಟ್ವಾಲ್ ಅಡಿಕೆ ಕಳವಾಗಿತ್ತು. ಮೊಯಿದ್ದೀನ್ ಅವರು ಮಾಡಿದ ಚಿಲ್ಲರೆ ಸಾಲವನ್ನು ತೀರಿಸಲು ಎಂದು ಅಡಿಕೆ ಸುಲಿದು ಮಾರಾಟ ಮಾಡಲು ಯೋಚಿಸಿದ್ದರು.
ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಎಸ್ ಐ ಪ್ರಸನ್ನ ಅವರ ತಂಡ ಕಳವು ಆರೋಪಿಗಳ ಪತ್ತೆಗೆ ಕಾರ್ಯಚರಣೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಪ್ರೋಬೆಸನರಿ ಎಸ್.ಐ.ವಿನೋದ್ ಎಚ್.ಕೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.