ಇಂದು ವಿಶ್ವದಾತ್ಯಂತ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಸಂಭ್ರಮ. 2014 ಡಿಸೆಂಬರ್ 11 ರಂದು ವಿಶ್ವಸಂಸ್ಥೆ, ‘ಜೂನ್ 21’ ರಂದು ‘ಅಂತರಾಷ್ಟ್ರೀಯ ಯೋಗ ದಿನ’ವನ್ನಾಗಿ ಆಚರಿಸುವುದೆಂದು ಘೋಷಣೆ ಮಾಡಿತ್ತು. ಹೀಗಾಗಿ ಇಂದು ಜಗತ್ತಿನ 177 ಕ್ಕೂ ಅಧಿಕ ದೇಶಗಳು ಯೋಗಾಭ್ಯಾಸದ ಮೂಲಕ ಯೋಗ ದಿನವನ್ನು ಆಚರಿಸುತ್ತಿದೆ.
ಪ್ರಾಚೀನ ಕಾಲದಿಂದಲೇ ಋಷಿಮುನಿಗಳು ಯೋಗದಿಂದ ಸತ್ಯದರ್ಶನ ಕಂಡುಕೊಂಡು ಬಂದಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಯೋಗವನ್ನು ಮರೆತು ಯೋಗ ರಹಸ್ಯದ ಸತ್ಯವನ್ನು ತಿಳಿಯಲು ಪ್ರಯತ್ನಿಸುತ್ತಿರುವುದಂತು ಸತ್ಯ ಸಂಗತಿ.
ಯೋಗ ಎಂಬುದು ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇರೆ ಬೇರೆ ವಿಷಯಗಳಲ್ಲಿ ಹರಿದಾಡುವ ಮನಸ್ಸನ್ನು ನಿಯಂತ್ರಣದಲ್ಲಿರಿಸಿ, ಆತ್ಮನಲ್ಲಿಯೇ ಸ್ಥಿರವಾಗಿ ನಿಲ್ಲುವಂತೆ ಮಾಡುವುದೇ ಯೋಗ.
‘ಆಹಾರ ಶುದ್ಧಿಯಿಂದ ಮನ ಶುದ್ದಿಯಾಗುತ್ತದೆ. ಮನ ಶುದ್ಧಿಯಿಂದ ಸತ್ಯದ ಸ್ಥಿರಸ್ಮೃತಿ ಉಂಟಾಗುತ್ತದೆ. ಇಂಥ ಸ್ಮ್ರತಿ ಉಂಟಾದರೆ ಎಲ್ಲ ಅಜ್ಞಾನಗಳೂ ನಾಶವಾಗುತ್ತದೆ’
ಜೀವನದಲ್ಲಿ ಉತ್ಸಾಹದಲ್ಲಿರಬೇಕಾದರೆ ಶುದ್ಧ ಆಹಾರ ಸೇವನೆ ಮತ್ತು ಯೋಗವನ್ನು ಮಾಡಲೇಬೇಕು. ಯೋಗ ನಿಜವಾದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಮಾತ್ರವಲ್ಲ ಬದುಕನ್ನು ಕಲಿಸುತ್ತದೆ. ಸಧ್ಯದ ಜೀವನ ಶೈಲಿ, ಆಹಾರ ಶೈಲಿಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಯೋಗಭ್ಯಾಸದ ಮೊರೆ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಲ್ಲದರಲ್ಲೂ ಬ್ಯುಸಿ. ಬೆಳಗಾದ್ರೆ ಕೆಲಸ ಮುಗಿಸಿ ಆಫೀಸಿಗೆ ಹೋಗಿ ಕೆಲಸ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡರೆ ಸಾಕೆನ್ನುವ ಪರಿಸ್ಥಿತಿಯಲ್ಲಿ ಜನ ಬದುಕುತ್ತಿದ್ದಾರೆ. ಸಮಯದ ಹಿಂದೆ ಮನುಷ್ಯನ ಕಾಲು ಹೆಜ್ಜೆ ಹಾಕುತ್ತಿದೆ. ಬದಲಾದ ಜಗತ್ತಿನಲ್ಲಿ ಮನುಷ್ಯನ ಆರೋಗ್ಯ ಕೂಡ ಬದಲಾಗುತ್ತಿದೆ. ಆತನ ಬ್ಯುಸಿ ಲೈಫ್ ಸ್ಟೈಲ್ ನಿಂದಾಗಿ ನಾನಾ ಕಾಯಿಲೆಗಳು ದೇಹವನ್ನು ಹೊಕ್ಕುತ್ತಿವೆ. ಬೊಜ್ಜು ಹೆಚ್ಚುತ್ತಿದೆ, ಬಿಪಿ ಶುಗರ್ ವಯಸ್ಸೆ ಅಲ್ಲದ ವಯಸ್ಸಲ್ಲಿ ಆಕ್ರಮಿಸುತ್ತಿವೆ. ಇದಕ್ಕೆಲ್ಲಾ ಕಾರಣ ನಮ್ಮ ದೇಹಕ್ಕೆ ಯಾವುದೇ ಕೆಲಸ ಕೊಡದೆ ಇರೋದು. ಹೀಗಾಗಿ ವರ್ಷಕ್ಕೊಮ್ಮೆ ಯೋಗದಿಂದ ಆರೋಗ್ಯ ವೃದ್ದಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ದೇಹಕ್ಕೆ ವ್ಯಾಯಾಮ ಬೇಕಾಗಿರೋದು ನಗರ ಪ್ರದೇಶದ ಜನಗಳಿಗೆ ಮಾತ್ರವಲ್ಲ. ಇದಕ್ಕೆ ಹಳ್ಳಿ ಜನರು ಹೊರತಾಗಿಲ್ಲ.
ಅಂದೊಂದು ಕಾಲವಿತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೆಳಗೆದ್ದು ನಡೆಯುತ್ತಿದ್ದ ಕೆಲಸಗಳು ನಗರವಾಸಿಗಳ ಜಿಮ್, ಯೋಗಾಸನವನ್ನೇ ಮೀರಿಸುತ್ತಿತ್ತು. ಬೆಳಗ್ಗೆದ್ದು ಬಾಗಿಲಿಗೆ ಸಗಣಿ ನೀರನ್ನ ಹಾಕ್ತಾ ಇದ್ರು. ಆ ಸಮಯದಲ್ಲಿ ಸಗಣಿ ಕಲಸುವ ಕೆಲಸ ಒಂದು ರೀತಿಯಲ್ಲಿ ಕೈಗೆ ವ್ಯಾಯಾಮಾ ಆಗ್ತಾ ಇತ್ತು. ಕೈ ಬೀಸಿ ಸಗಣಿ ನೀರನ್ನ ನೆಲಕ್ಕೆ ಹಾಕ್ತಾ ಇದ್ರು. ಕಸ ಗುಡಿಸುವಾಗ ಕೈ ಪೂರ್ತಿ ಹಿಂದೊಮ್ಮೆ ಮುಂದೊಮ್ಮೆ ಆಡಿಸಲೇ ಬೇಕಿತ್ತು. ಇನ್ನು ಆಗ ಮನೆಬಾಗಿಲಿಗೆ ನಲ್ಲಿ ನೀರಿನ ವ್ಯವಸ್ಥೆ ಇರ್ಲಿಲ್ಲ. ಬೋರ್ ವೆಲ್ ನಲ್ಲಿ ನೀರನ್ನ ಒತ್ತಬೇಕಿತ್ತು. ನಮ್ಮ ಜನಕ್ಕೆ ಅದಕ್ಕಿಂತ ಯೋಗಾಸನ ಬೇಕಾ..?
ಇನ್ನು ಬೆಳಗ್ಗೆ ಆದ್ರೆ ಬುತ್ತಿ ಕಟ್ಟಿಕೊಂಡು ತೋಟದ, ಹೊಲದ ಕಡೆ ನಡಿಗೆ ಬೆಳೆಸುತ್ತಿದ್ದರು. ಹೊಟ್ಟೆತುಂಬಾ ತಿಂದು, ಬೆವರು ಹರಿಯುವ ತನಕ ದುಡಿಯುತ್ತಿದ್ರು. ಪೌಷ್ಟಿಕಾಂಶ ಆಹಾರ ತಿಂದು ಗಟ್ಟಿಯಾಗಿದ್ರು. ಕಾಲ ಬದಲಾಗಿದೆ. ಹಳ್ಳಿ ಜೀವನವೂ ಮೊದಲಿನಂತಿಲ್ಲ ಅಲ್ಲಿನ ಜನಕ್ಕೂ ಯೋಗಾಭ್ಯಾಸದಂತ ದೇಹ ದಂಡಿಸುವಂತ ವ್ಯಾಯಾಮದ ಅಗತ್ಯತೆ ಶುರುವಾಗಿದೆ. ಬೆಳಗಿನ ಕೆಲಸಗಳು ನಿಂತಿವೆ. ಬೋರ್ ವೆಲ್‍ಗಳಿಂದ ಮನೆ ಬಾಗಿಲಿ ನೀರು ಬರ್ತಿದೆ, ಸಗಣಿ ನೆಲ ಹೋಗಿ ಸಿಮೆಂಟ್ ಬಂದಿದೆ, ತೋಟದ ಕಡೆ ಹೆಜ್ಜೆ ಹಾಕುತ್ತಿದ್ದವರು ಗಾರ್ಮೆಂಟ್ಸ್, ಫ್ಯಾಕ್ಟರಿ ಅಂತ ಹೋಗಿ ಬೆನ್ನು ನೋವು ತರಿಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಳ್ಳಿಯಲ್ಲೂ ಹಳ್ಳಿಜೀವನ ಸಿಗುತ್ತಿಲ್ಲ. ಮನುಷ್ಯನ ಬ್ಯುಸಿ ಜೀವನ ಕೇವಲ ಸಮಯದ ಜೊತೆಗೆ ಓಡುವಂತಾಗಿದೆ. ದೇಹಕ್ಕೆ ಯಾವುದೇ ವ್ಯಾಯಾಮದಂತ ಕೆಲಸಗಳಿಲ್ಲ, ಬೆವರು ಹರಿಸುತ್ತಿಲ್ಲ. ಅದಕ್ಕೆ ಪೂರಕವಾದ ಆರೋಗ್ಯಕರ ಆಹಾರ ಮೊದಲೇ ಇಲ್ಲ. ಕೆಮಿಕಲ್ ನಲ್ಲೇ ಮನುಷ್ಯನ ಜೀವನ ಸಾಗುತ್ತಿದೆ. ಕೇವಲ ಯಂತ್ರದಂತೆ ಕೆಲಸ ಮಾಡುತ್ತಿರುವ ಜನರಿಗೆ ಆರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸ ತುಂಬಾ ಅವಶ್ಯಕತೆ ಇದೆ. ಆದ್ರೆ ಯೋಗದಿನದಂದು ಮಾತ್ರ ಅದರ ಮಹತ್ವವನ್ನು ಅರಿಯುವಂತಾಗುತ್ತಿದೆ. ನಾವು ವಿಶ್ವಕ್ಕೇ ಯೋಗದ ಪರಿಚಯ ಮಾಡಿಸಿದ್ದೇವೆ ಆದರೆ ನಾವುಗಳೇ ಪ್ರತಿದಿನ ಯೋಗ ಮಾಡುವ ಅಭ್ಯಾಸ ಮರೆತ್ತಿದ್ದೇವೆ.ಉತ್ತಮ ಆರೋಗ್ಯಕ್ಕಾಗಿ ಯೋಗಭ್ಯಾಸ ಪ್ರತಿದಿನ ಇದ್ದರೆ ಉತ್ತಮ.