ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವಯೋಗ ದಿನದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಓಂಕಾರ ಯೋಗ ಕೇಂದ್ರದ ಯೋಗ ಗುರು ಕರುಣಾಕರ ಉಪಾಧ್ಯಾಯ ಮಾತನಾಡಿ ಖುಷಿ ಸಂಸ್ಕೃತಿಯ ಒಂದು ಭಾಗವೇ ಯೋಗ.
ಯೋಗ ಎಂಬುದು ನಮ್ಮ ಜ್ಞಾನದ ಅಭಿವೃದ್ಧಿಗೆ ಪೂರಕಾವಾದ ಕ್ರಿಯೆ. ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ಯೋಗಕ್ಕಿರುವ ಅಗಾಧ ಶಕ್ತಿ ಬೇರೊಂದಿಲ್ಲ, ಸಣ್ಣ ಕಾಲಾವಧಿಯಲ್ಲೂ ಯೋಗಮಾಡಿ ನೆಮ್ಮದಿ ಪಡೆಯಬಹುದು. ದೇಹದಲ್ಲಿರುವ ಸ್ನಾಯುಗಳು ಬಲವರ್ಧನೆಯಾಗಲು ಯೋಗ ಸಹಕಾರಿ. ಚಂಚಲ ಮನಸ್ಸನ್ನು ಪ್ರಯತ್ನ ಪೂರ್ವಕವಾಗಿ ಒಂದೆಡೆಗೆ ತರಲು ಯೋಗವನ್ನು ಪ್ರತಿಯೊಬ್ಬರು ದಿನಂಪ್ರತಿ ಮಾಡಬೇಕು. ಪರಿಪೂರ್ಣ ಜೀವನಕ್ಕೆ ಯೋಗ ಅತ್ಯಗತ್ಯ. ಯೋಗವೆಂದರೆ ಕೆಲವಷ್ಟು ಆಸನಗಳಲ್ಲ. ಪ್ರಾಣಾಯಾಮ ಮತ್ತು ಆಸನ ಸೇರಿದರೆ ಮಾತ್ರ ಯೋಗವಾಗುತ್ತದೆ. ಒತ್ತಾಯಪೂರ್ವಕ ಯೋಗವು ನಿರರ್ಥಕವಾದುದು. ಯೋಗವನ್ನು ಸ್ವಇಚ್ಛೆಯಿಂದ ಮಾಡಬೇಕು. ಯಾರದೋ ಒತ್ತಾಯಕ್ಕೆ ಯೋಗ ಮಾಡುವುದು ಪ್ರಯೋಜನಕಾರಿಯಲ್ಲ.
ಮಾನವಕುಲದ ಏಕತೆಯ ಪರಿಕಲ್ಪನೆಗೆ ಯೋಗ ಪ್ರಾಮುಖ್ಯವಾದುದು. ನಮ್ಮ ಆಧ್ಯಾತ್ಮದಲ್ಲಿ ಯೋಗ ಇದೆ, ನಮ್ಮಜೀವನ ಪದ್ದತಿಯಲ್ಲಿ ಯೋಗ ಇದೆ. ವಸುದೈವ ಕುಟುಂಬಕಂ ಅನ್ನುವ ಆದರ್ಶದಲ್ಲಿ ಇಡೀ ಪ್ರಪಂಚದ ಜನರ ಆರೋಗ್ಯ ಕಾಳಜಿಯ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳಲ್ಲಿ ಯೋಗ ಸಂಸ್ಕೃತಿಯನ್ನು ಜಾಗೃತ ಪಡಿಸುವ ದೃಷ್ಟಿಯಿಂದ ವಿವೇಕಾನಂದ ಪದವಿ ಪೂರ್ವಕಾಲೇಜು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು. ಅಲ್ಲದೆ ವಿವಿಧ ಆಸನಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಮಾಡಿಸಿ, ಅವುಗಳ ಪ್ರಾಮುಖ್ಯತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ .ಪಿ.,ಪ್ರಾಂಶುಪಾಲ ಸಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸುಮಾರು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.