ತಿರುವನಂತಪುರ : ತಮಿಳುನಾಡು ರಾಜ್ಯ ಗಂಭೀರ ನೀರಿನ ಕೊರತೆ ಎದುರಿಸುತ್ತಿದೆ. ನೀರಿಗಾಗಿ ಕರ್ನಾಟಕವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ನಮ್ಮ ರಾಜ್ಯದಲ್ಲೂ ಬರಗಾಲ ತಾಂಡವವಾಡುತ್ತಿದೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ.. ಈ ವಿಷಯ ತಿಳಿದಿದ್ದರು ತಮಿಳುನಾಡು ನಮ್ಮ ಪಾಲಿನ ನೀರು ಕೊಡಿ ಎಂದು ಪೀಡಿಸುತ್ತಿದೆ. ತಮಿಳುನಾಡಿನ ಜನತೆ ನೀರಿಗಾಘಿ ಪರದಾಡುವುದನ್ನು ನೋಡಲಿಕ್ಕಾಗದೆ ಕೇರಳ ಸರ್ಕಾರ 20 ಲಕ್ಷ ಲೀಟರ್ ಕುಡಿಯುವ ನೀರನ್ನು ರೈಲಿನ ಮೂಲಕ ತಮಿಳುನಾಡು ಕಳುಹಿಸಿಕೊಡಲು ನಿರ್ಧರಿಸಿದೆ. ಆದರೆ ದುರಹಂಕಾರಿ ತಮಿಳುನಾಡು ಸರ್ಕಾರ ನಮಗೆ ನಿಮ್ಮ ನೀರಿನ ಅಗತ್ಯವಿಲ್ಲ ಎಂದು ಉತ್ತರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿ ಗುರುವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಚೆನ್ನೈನ ನಾಲ್ಕು ಪ್ರಮುಖ ಸರೋವರಗಳು ಹಾಗೂ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ಮೂಲಗಳು ಬತ್ತಿಹೋಗಿರುವ ಕಾರಣ, ಅಂತರ್ಜಲಮಟ್ಟವೂ ಕುಸಿದಿದ್ದು, ಭಾರೀ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಚೆನೈನ ಬಹುತೇಕ ಐಷರಾಮಿ ಹೊಟೇಲ್‍ಗಳು, ಕಂಪೆನಿಗಳು ನೀರಿನ ಅಭಾವದಿಂದ ಬಾಗಿಲು ಮುಚ್ಚಿವೆ. ಹೀಗಿದ್ದೂ ತಮಿಳುನಾಡು ನಮಗೆ ನೀರು ಬೇಡವೆಂದ ದುರ್ವರ್ತನೆ ಪ್ರದರ್ಶಿಸಿದೆ.
ಕೇರಳ ಸಿಎಂ ವಿಜಯನ್ ನೀಡಲಿರುವ ಕುಡಿಯುವ ನೀರನ್ನು ಸ್ವೀಕರಿಸಿ. ಅದನ್ನು ಕಡೆಗಣಿಸಬೇಡಿ. ಜನರ ನೀರಿನ ದಾಹವನ್ನು ನೀಗಿಸಲು ರಾಜ್ಯ ಸರಕಾರ ಕೇರಳ ಸರಕಾರದೊಂದಿಗೆ ಕಾರ್ಯಪ್ರವೃತ್ತವಾಗಬೇಕು. ಸಮಯಕ್ಕೆ ಸರಿಯಾಗಿ ತಮಿಳುನಾಡಿಗೆ ನೀರನ್ನು ನೀಡಲು ಮುಂದಾಗಿರುವ ಕೇರಳ ಸಿಎಂ ವಿಜಯನ್‍ಗೆ ಹೃದಯಪೂರ್ವಕ ಕೃತಜ್ಞತೆಗಳು ಎಂದು ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಎಂಕೆ ಸ್ಟಾಲಿನ್ ಹೇಳಿದ್ದಾರೆ.
”ರಾಜ್ಯ ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಇಂತಹ ದೊಡ್ಡ ಆಫರನ್ನು ನಿರಾಕರಿಸುವ ಪ್ರಶ್ನೆಯಿಲ್ಲ. ಕೇರಳದ ಆಫರನ್ನು ಒಪ್ಪಿಕೊಳ್ಳುವ ಮೊದಲು ಸಾರಿಗೆ ವೆಚ್ಚ ಹಾಗೂ ಇತರ ವೆಚ್ಚಗಳನ್ನು ಪರಿಗಣಿಸಲಿದೆ. ಚೆನ್ನೈಗೆ ಪ್ರತಿದಿನ 525 ಎಂಎಲ್‍ಡಿ ನೀರಿನ ಅಗತ್ಯವಿದೆ. ಕೇರಳ 2 ಎಂಎಲ್‍ಡಿ ನೀರನ್ನು ನೀಡಲು ಮುಂದಾಗಿದೆ. ಒಂದು ವೇಳೆ ಕೇರಳ ಸರಕಾರ ಪ್ರತಿದಿನವೂ 2 ಎಂಎಲ್‍ಡಿ ನೀರನ್ನು ನೀಡಿದರೆ ತುಂಬಾ ಸಹಾಯವಾಗುತ್ತದೆ ಎಂದು ತಮಿಳುನಾಡಿನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕೇರಳದ ಆಫರನ್ನು ಸ್ವೀಕರಿಸಬೇಕೆ? ಎಂದು ತಮಿಳುನಾಡಿನ ಸನ್ಮಾನ್ಯ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯವರು ಶುಕ್ರವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಮಿಳುನಾಡು ಸ್ಥಳೀಯಾಡಳಿತ ಸಚಿವ ಎಸ್‍ಪಿ ವೇಲುಮಣಿ ಹೇಳಿದ್ದಾರೆ. ಪ್ರಜೆಗಳು ನೀರಿಲ್ಲದೆ ನಲುಗಿ ಹೋದ್ರು, ತಮ್ಮ ಅಹಂಕಾರವನ್ನು ಮಾತ್ರ ಪಳನಿಸ್ವಾಮಿ ಪಕ್ಕಕ್ಕಿಡಲು ಇನ್ನು ಮೀನಾಮೇಷ ಎಣಿಸುತ್ತಿದ್ದಾರೆ.