ಒಂದು ಕಾರ್ಯದಲ್ಲಿ ತೊಡಗಿದಾಗ ಜಗತ್ತನ್ನೆ ಮರೆಯುವಂತಹ ಏಕಾಗ್ರತೆ ನಮ್ಮಲ್ಲಿರಬೇಕು-ಶ್ರೀಕೃಷ್ಣ ಉಪಾಧ್ಯಾಯ – ಕಹಳೆ ನ್ಯೂಸ್
ಪುತ್ತೂರು: ಯೋಗ ಅನ್ನುವಂತಹದು ಭಾರತದ ಯೋಗಿಗಳ ಕೊಡುಗೆ. ಇದನ್ನೀಗ ವಿಶ್ವದೆಲ್ಲೆಡೆ ಆಚರಿಸಿ ಭಾರತವು ಇಡೀ ವಿಶ್ವಕ್ಕೆ ಯೋಗ ಗುರುವಾಗಿದೆ. ಎಲ್ಲರಿಗೂ ಬಹುಮುಖ್ಯವಾದುದು ಮನಸ್ಸಿನ ಹಿಡಿತ. ಹಾಗಾಗಿಯೇ ಆಧ್ಯಾತ್ಮಕ್ಕೂ ಶಿಸ್ತಿಗೂ ಅವಿನಭಾವ ಸಂಬಂಧವಿದೆ. ಇಂದು ಯೋಗಾಸನ ದಿನವಲ್ಲ, ನಮ್ಮ ಯೋಗದ ದಿನ. ನಾವು ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡೆವೆಂದರೆ 90 ವರ್ಷದ ಮುಪ್ಪಿನಲ್ಲೂ ನಳನಳಿಸುತ್ತಿರುತ್ತೇವೆ. ಯೋಗ ಮಾಡಬೇಕಾಗಿರುವುದು ಆರೋಗ್ಯ ಕೆಟ್ಟಾಗವಲ್ಲ ಆರೋಗ್ಯ ಸುಸ್ಥಿತಿಯಲ್ಲಿರುವಾಗ. ಧ್ಯಾನ ಏಕಾಗ್ರತೆಯ ತುತ್ತತುದಿ.
ನಾವು ಒಂದು ಕಾರ್ಯದಲ್ಲಿ ತೊಡಗಿದ್ದೇವೆಂದರೆ ಜಗತ್ತನ್ನೇ ಮರೆಯುವಂತಹದ ಏಕಾಗ್ರತೆ ನಮ್ಮದಾಗಿರಬೇಕು. ಬದುಕಿನಲ್ಲಿ ಯಾವಾಗ ಕಶ್ಮಲ ವಿಚಾರಗಳು ಬರುವುದಿಲ್ಲವೋ ಆಗ ಬದುಕು ಶುದ್ದಿಯಾಗುತ್ತದೆ ಎಂದು ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಆಯೋಜಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿದರು.
ಜನವರಿ 21 ಶುಕ್ರವಾರದಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ನಾರಾಯಣಗುರುಗಳ ಪುತ್ಥಳಿಗೆ ಹಾರ ಸಮರ್ಪಣೆ ಮಾಡಿ, ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಅಂಬಿಕಾ ಕಾಲೇಜಿನ ಉಪನ್ಯಾಸಕರಾದ ಶ್ರೀಕೃಷ್ಣ ಉಪಾಧ್ಯಾಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್ ಮಾತನಾಡಿ ಯೋಗದಿನ ನಮ್ಮೆಲ್ಲರ ಸುಯೋಗದ ದಿನ. ಯೋಗದ ಮಹತ್ವವೇ ಅಂತಹದ್ದು, ಇಂದು ಕಲೋತ್ಸವವನ್ನು ಆಚರಿಸುತ್ತಿದ್ದೇವೆ ಏಕೆಂದರೆ ಈ ದಿನಕ್ಕೆ ಪರಿಪೂರ್ಣತೆಯನ್ನು ನೀಡಿ ವಿದ್ಯಾರ್ಥಿಗಳಲ್ಲಿ ಯೋಗ ಮತ್ತು ಪ್ರತಿಭೆಯ ಅನಾವರಣಗೊಳಿಸುವ ಸಲುವಾಗಿ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಲ್ಲವ ಸಂಘದ ಅಧ್ಯಕ್ಷರು ಮತ್ತು ಅಕ್ಷಯ ಗ್ರೂಫ್‍ನ ಮಾಲಕರಾದ ಜಯಂತ್ ನಡುಬೈಲ್ ಮಾತನಾಡಿ ನಮ್ಮ ಜೀವಿತಾವಧಿ ಬಹಳಷ್ಟು ಕಡಿಮೆಯಾಗಿದೆ. ಏಕೆಂದರೆ ಇವೆಲ್ಲವೂ ನಮ್ಮೆಲ್ಲರ ದೈನಂದಿನ ಚಟುವಟಿಕೆಗಳನ್ನು ಹೊಂದಿಕೊಂಡಿರುತ್ತದೆ. ನಮ್ಮ ಪೂರ್ವಜರು 100ರಿಂದ 130 ವರ್ಷಗಳಷ್ಟು ಬದುಕುತ್ತಿದ್ದರು ಎಂದರೆ ಅವರದ್ದು ಕಠಿಣ ಪರಿಶ್ರಮದ ಜೀವನವಾಗಿತ್ತು. ನಮ್ಮ ಗುರಿ ಮನಸ್ಸಲ್ಲಿರಬೇಕು. ನಮ್ಮ ಜೀವನ ಕೈಯಲ್ಲಿರಬೇಕು. ಹೆತ್ತವರ ಶ್ರಮಕ್ಕೆ ಆಶಯಕ್ಕೆ ನೀವು ನೀರೇರೆದು ಪೋಷಿಸಬೇಕು. ಈಗ ಕಾಲಾಹರಣ ಮಾಡಿ ನಂತರ ಚಿಂತಿಸಿ ಫಲವಿಲ್ಲ. ಈಗಲೂ ಕಾಲ ಮಿಂಚಿಲ್ಲ, ಕಠಿಣ ಪರಿಶ್ರಮದಿಂದ ಫಲಿತಾಂಶ ಪಡೆಯಿರಿ ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಗತಿ ಸ್ಟಡಿ ಸೆಂಟರ್ ನ ನೂತನ ವಸತಿಯುತ ಕ್ಯಾಂಪಸ್‍ನ ಪ್ರಾಂಶುಪಾಲೆ ಜಯಶ್ರೀ ಮಾತನಾಡಿ ಮನುಷ್ಯನ ಬುದ್ಧಿಗೂ, ಮನಸ್ಸಿಗೂ ವ್ಯತ್ಯಾಸವಿದೆ. ಮನಸ್ಸು ಬೇಕಾದ ಹಾಗೆ ಮಾಡುತ್ತದೆ. ಬುದ್ಧಿ ಯಾವತ್ತೂ ತಪ್ಪು ಹಾದಿಗೆ ಬಿಡುವುದಿಲ್ಲ. ಮನಸ್ಸಿನ ಕೈಯಲ್ಲಿ ಬುದ್ಧಿಯನ್ನು ಕೊಡಬೇಡಿ, ಬುದ್ಧಿಯ ಕೈಯಲ್ಲಿ ಮನಸ್ಸನ್ನು ಕೊಡಿ, ನಿಮ್ಮ ಬದುಕು ಶ್ರೇಯಸ್ಕರವಾಗುತ್ತದೆ. ನಮ್ಮ ಕಾರ್ಯದ ಜೊತೆಗೆ ನಿಮ್ಮ ಅಂತಃಶಕ್ತಿಯಿದ್ದರೆ ಎಲ್ಲವೂ ಸಾಧ್ಯ. ನಿಮ್ಮ ಸಾಧನೆಗೆ ನಮ್ಮ ಪ್ರೇರಣೆಯಿದೆ ಎಂದು ನುಡಿದರು.
ಮಧ್ಯಾಹ್ನದ ಭೋಜನದ ನಂತರ ವಿದ್ಯಾರ್ಥಿಗಳಿಂದ 3ನೇ ವರ್ಷದ ಕಲೋತ್ಸವ ಎಂಬ ವಿನೂತನ ಪ್ರತಿಭಾ ದಿನಾಚರಣೆ ನಡೆಯಿತು. ಸಭಾ ಕಾರ್ಯಕ್ರಮವನ್ನು ಉಪನ್ಯಾಸಕಿ ಗೀತಾ ಕೊಂಕೋಡಿ ನಿರೂಪಿಸಿ, ನಿಲಯ ಪಾಲಕರಾದ ಜನಾರ್ಧನ್ ಸ್ವಾಗತಿಸಿ, ಉಪನ್ಯಾಸಕಿ ವಿಮಲ ವಂದಿಸಿದರು. ಸಭೆಯಲ್ಲಿ ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.