ಕುಕ್ಕೆ ಸುಬ್ರಹ್ಮಣ್ಯ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ದಿನವಿಡಿ ವಿದ್ಯುತ್, ಮೊಬೈಲ್ ಸ್ತಗಿತ ಭಕ್ತರ ಪರದಾಟ – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ದಿನವಿಡಿ ವಿದ್ಯುತ್ ಹಾಗೂ ದೂರವಾಣಿ ಮೊಬೈಲ್ ಸೇವೆಗಳು ಕೈ ಕೊಟ್ಟಿತ್ತು, ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಹಲವು ಸೇವೆಗಳು ವ್ಯತ್ಯಾಯಗೊಂಡು ಜನಜೀವನ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ಹಾದು ಹೋದ ಮಾರ್ಗದ ಲೈನ್ ದುರಸ್ತಿಗಾಗಿ ಶನಿವಾರ ಬೆಳಗ್ಗೆಯಿಂದ ಸಂಜೆ 6 ರ ತನಕ ಮೆಸ್ಕಾಂ ಇಲಾಖೆ ವಿದ್ಯುತ್ ಸ್ತಗಿತಗೊಳಿಸಿತ್ತು. ಸಂಜೆ 6ರ ವೇಳೆಗೆ ನೀಡಬೇಕಿದ್ದ ಕರೆಂಟು ಬದಲಿ ರಾತ್ರಿ 9 ಗಂಟೆ ವೇಳೆಯಾದರೂ ಬಂದಿರಲಿಲ್ಲ. ಹಗಲಿಡಿ ಕರೆಂಟ್ ಕೈ ಕೊಟ್ಟಿದ್ದರಿಂದ ವಿದ್ಯುತ್ ಅವಲಂಬಿತವಾಗಿ ಕಾರ್ಯಚರಿಸುತ್ತಿರುವ ಸುಬ್ರಹ್ಮಣ್ಯ ಸಹಿತ ಈ ಭಾಗದ ಎಲ್ಲ ಬಿಎಸ್ಎನ್‍ಎಲ್ ಹಾಗೂ ಬಿಎಸ್ಎಲ್‍ಎಲ್ ಟವರಿನ ಜತೆ ಹೊಂದಾಣಿಕೆ ಮಾಡಿಕೊಂಡ ಇತೆರೆ ಖಾಸಗಿ ಕಂಪೆನಿಗಳ ಮೊಬೈಲ್ ಸೇವೆಗಳು ಸ್ತಬ್ಧಗೊಂಡಿದ್ದವು. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ಕುಕ್ಕೆ ನಗರದಲ್ಲೂ ವಿದ್ಯುತ್, ಮೊಬೈಲ್ ಸೇವೆಗಳಲ್ಲಿ ವ್ಯತ್ಯಾಯಗೊಂಡಿದ್ದರಿಂದ ಜನ ತೊಂದರೆಗೊಳಗಾದರು.
ರಾತ್ರಿ ತನಕವು ಸರಬರಾಜು ಆಗದೆ ಇದ್ದ ಕಾರಣ ಸಂಪರ್ಕ ಸಹಿತ ಹಲವು ಸೇವೆಗಳಿಗಾಗಿ ಜನ ಪರದಾಡಿದರು. ಕುಕ್ಕೆ ಕ್ಷೇತ್ರದಲ್ಲಿ ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು ವಿದ್ಯುತ್ ಕೈ ಕೊಟ್ಟು ದೇವಸ್ಥಾನದ ದೂರವಾಣಿ. ಇಂಟರ್ ನೆಟ್ ಇತ್ಯಾದಿ ಸೇವೆಗಳು ಕಾರ್ಯ ನಿರ್ವಹಿಸದೆ ಭಕ್ತರು ಸಂಕಷ್ಟಕ್ಕೆ ಒಳಗಾದರು. ದೇವಸ್ಥಾನದ ಸ್ಥಿರ ದೂರವಾಣಿಗಳಿಗೆ ಹಾಗು ಮೊಬೈಲ್ ಸಂಖ್ಯೆಗೆ ಹೊರಗಿನಿಂದ ಕರೆ ಮಾಡಿದಾಗ ಎಲ್ಲ ಸಂಖ್ಯೆಗಳು ಸ್ವಿಚ್‍ಆಪ್ ಆಗಿದ್ದವು.
ವಿವಿಧ ಸೇವೆಗಳಿಗೆ ರಶೀದಿ ಬುಕ್ ಮಾಡಿಸುವಲ್ಲಿಯೂ ಭಕ್ತರು ಅಡಚಣೆಗೆ ಒಳಗಾದರು. ದೇವಸ್ಥಾನದ ಸೇವಾ ಕೌಂಟರುಗಳ ಕಂಪ್ಯೂಟರ್ ಕಾರ್ಯಾಚರಿಸಿಲ್ಲ. ಜತೆಗೆ ಉಳಿದೆಲ್ಲ ನಾಗರಿಕ ಸೇವೆಗಳು ಸಿಗದೆ ಭಕ್ತರು. ಜನತೆ ಮೆಸ್ಕಾಂ ಹಾಗೂ ಮೊಬೈಲ್ ಸಂಸ್ಥೆಗಳಿಗೆ ಹಿಡಿಶಾಪ ಹಾಕುತಿದ್ದರು. ಲೈನ್ ದುರಸ್ತಿ ನೆಪದಲ್ಲಿ ಮೆಸ್ಕಾಂ ವಾರದಲ್ಲಿ ಗುರುವಾರ ಮತ್ತು ಶನಿವಾರ ಈ ಎರಡು ದಿನ ಬೆಳಗ್ಗೆಯಿಂದ ಸಂಜೆ ತನಕ ಪವರ್ ಕಟ್ ಅಂತ ಪ್ರಕಟನೆ ಹೊರಡಿಸಿ ವಿದ್ಯುತ್ ಸರಬರಾಜು ನಿಲ್ಲಿಸುತ್ತದೆ. ಆದರೆ ಈ ದಿನಗಳಲ್ಲಿ ತಡ ರಾತ್ರಿಯಾದರೂ ಸರಬರಾಜು ನೀಡದೆ ಜನತೆಯನ್ನು ಮೆಸ್ಕಾಂ ಸತಾಯಿಸುತ್ತಿದೆ. ಇದಕ್ಕೆ ಈ ಭಾಗದಲ್ಲಿ ಭಾರಿ ಆಕ್ರೋಶ ವ್ಯಕ್ತಗೊಂಡಿದೆ.
ಧಾರ್ಮಿಕ ಕ್ಷೇತ್ರವಾದ ಕುಕ್ಕೆಸುಬ್ರಹ್ಮಣ್ಯ ನಗರವನ್ನು ಪವರ್ ಕಟ್ ವ್ಯವಸ್ಥೆಯಿಂದ ಹೊರಗಿಡುವಂತೆ ಈ ಹಿಂದೆ ಅನೇಕ ಭಾರಿ ಮೆಸ್ಕಾಂ ಇಲಾಖೆ ಗಮನಕ್ಕೆ ಸ್ಥಳಿಯರು ತಂದಿದ್ದರೂ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಗಳಿಂದ ವಿದ್ಯುತ್ ಸರಬರಾಜು ಸ್ತಗಿತ ಮಾಡುತಿದ್ದು ಕ್ಷೇತ್ರ ಬಹುತೇಕ ದಿನಗಳು ಕತ್ತಲಿನಲ್ಲಿ ಇರುವಂತಾಗಿದೆ.