ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕಾದ ವರದಿಯನ್ನು ಭಾರತ ತಿರಸ್ಕರಿಸಿದೆ. ಭಾರತದ ನಾಗರಿಕರಿಗೆ ಸಾಂವಿಧಾನಿಕವಾಗಿ ರಕ್ಷಿಸಿರುವ ಹಕ್ಕುಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ವಿದೇಶಿ ಸರಕಾರಕ್ಕೆ ಇಲ್ಲ ಎಂದು ಭಾರತ ಧೃಡಪಡಿಸಿದೆ.
ಕಳೆದ ವರ್ಷ ಭಾರತದಲ್ಲಿ ಹಿಂದೂ ಉಗ್ರವಾದಿ ಗುಂಪುಗಳು ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಮುಸ್ಲಿಮರ ಮೇಲೆ ಗೋಹತ್ಯೆ ಅಥವಾ ಗೋ ಮಾಂಸ ಮಾರಾಟದ ವದಂತಿ ಮೇಲೆ ಗುಂಪುಹಲ್ಲೆಗಳನ್ನು ಮಾಡಿವೆ ಎಂದು ಶುಕ್ರವಾರ ವರದಿಯಲ್ಲಿ ಆರೋಪ ಮಾಡಲಾಗಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಭಾರತದ ಜಾತ್ಯತೀತ ತತ್ವಗಳ ಬಗ್ಗೆ ಹೆಮ್ಮೆಯಿದೆ. ಸಹಿಷ್ಣುತೆ, ಬಹುತ್ವ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ದೀರ್ಘ ಕಾಲದಿಂದಲೂ ಎಲ್ಲರನ್ನೂ ಒಳಗೊಳ್ಳುವ ತತ್ವಕ್ಕೆ ಬದ್ಧವಾಗಿದ್ದೇವೆ ಎಂದಿದ್ದಾರೆ.
ಸಂವಿಧಾನವು ಎಲ್ಲ ನಾಗರಿಕರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುತ್ತದೆ. ಅದರಲ್ಲಿ ಅಲ್ಪಸಂಖ್ಯಾತರೂ ಒಳಗೊಂಡಿದ್ದಾರೆ. ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ಪ್ರಜಾಪ್ರಭುತ್ವ ಆಡಳಿತ ಹಾಗೂ ಈ ನೆಲದ ಕಾನೂನು ಮೂಲಭೂತ ರಕ್ಷಣೆಗೆ ಹಾಗೂ ಪ್ರಚುರಪಡಿಸಲು ಬದ್ಧವಾಗಿದೆ ಎಂದಿದ್ದಾರೆ.
ಸಂವಿಧಾನಬದ್ಧವಾಗಿ ನಮ್ಮ ದೇಶದ ನಾಗರಿಕರ ಸಂರಕ್ಷಿತ ಹಕ್ಕುಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಯಾವುದೇ ವಿದೇಶಿ ಸಂಸ್ಥೆ ಅಥವಾ ಸರಕಾರಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ವಾರ ಆಮೆರಿಕದ ಕಾರ್ಯದರ್ಶಿ ಮೈಕ್ ಪೊಂಪೆ ಮಾತನಾಡಿ, ಈಗ ಬಿಡುಗಡೆ ಮಾಡಿರುವುದು ಮಾಕ್ರ್ಸ್ ಕಾರ್ಡ್ ನಂತೆ. ಜಗತ್ತಿನ ಎಲ್ಲ ದೇಶ, ಪ್ರದೇಶಗಳಲ್ಲಿ ಮಾನವನ ಮೂಲಭೂತ ಹಕ್ಕುಗಳನ್ನು ಹೇಗೆ ಗೌರವಿಸಲಾಗುತ್ತದೆ ಎಂಬುದನ್ನು ಅಳೆಯಲಾಗಿದೆ ಎಂದಿದ್ದರು.