ಬೆಂಗಳೂರು: ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾವಿತ ಯೋಜನೆ ಅವೈಜ್ಞಾನಿಕ ಹಾಗೂ ಅತಾರ್ಕಿಕ. ವಿಶ್ವದಲ್ಲೇ ಅಪರೂಪದ ಜೀವವೈವಿಧ್ಯ ತಾಣ ಎನಿಸಿದ ಪಶ್ಚಿಮಘಟ್ಟ ಪರಿಸರಕ್ಕೆ ಈ ಯೋಜನೆ ಮಾರಕ. ಕಾರ್ಯಸಾಧುವಲ್ಲದ ಈ ಪ್ರಸ್ತಾವಿತ ಯೋಜನೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಒತ್ತಾಯಿಸಿದ್ದಾರೆ.
ಇಂಥ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯ ಬದಲಾಗಿ ಮಳೆ ನೀರು ಕೊಯ್ಲಿನಂಥ ಪರ್ಯಾಯ ವಿಧಾನದ ಮೂಲಕ ರಾಜಧಾನಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ; ಆದರೆ ಪರಿಸರ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಇಂದಿನ ಅಗತ್ಯ. ಪ್ರಕೃತಿಗೆ ವಿರುದ್ಧವಾದ ಯಾವ ಯೋಜನೆಯೂ ಸುಸ್ಥಿರವಾಗಲಾರದು. 400 ಕಿಲೋಮೀಟರ್ ದೂರದಿಂದ ಒಂದೂವರೆ ಸಾವಿರ ಅಡಿ ಎತ್ತರದ ಬೆಂಗಳೂರಿಗೆ ನೀರು ತರುವ ಪ್ರಸ್ತಾವ ಕೈಬಿಟ್ಟು, ರಾಜಧಾನಿಯ ಅನಿಯಂತ್ರಿತ ಬೆಳವಣಿಗೆ ತಡೆದು, ಸುಸ್ಥಿರ ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಜಾರಿಯಾಗಿರುವ ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ಸಾವೇಹಕ್ಕಲು, ವಾರಾಹಿ, ರೇಗುಸೊಪ್ಪೆ, ಗಾಜನೂರು, ಭದ್ರಾ, ಮಾಣಿ, ನಾಗಝರಿ, ಕಾಳಿ ಯೋಜನೆಗಳಿಂದ ಜನರು ಅಪಾರ ಕಷ್ಟ ನಷ್ಟ ಅನುಭವಿಸಿದ್ದಾರೆ. ತನ್ನ ಧಾರಣಾ ಸಾಮಥ್ರ್ಯ ಮೀರಿದ ಯೋಜನೆಗಳಿಗೆ ಸಿಕ್ಕು ಪಶ್ಚಿಮಘಟ್ಟ ನಲುಗುತ್ತಿದೆ. ಮತ್ತೊಂದು ಅಂಥ ದುಬಾರಿ ಯೋಜನೆಯ ದುಸ್ಸಾಹಸ ಮಾಡುವ ಬದಲು, ಮಳೆ ನೀರು ಕೊಯ್ಲಿನಂಥ ಸುಸ್ಥಿರ ವಿಧಾನದ ಮೂಲಕ ನೀರಿನ ಸಮಸ್ಯೆ ಬಗೆಹರಿಸುವತ್ತ ನಮ್ಮ ಆಡಳಿತಗಾರರು ಗಮನ ಹರಿಸಲು ಎಂದು ಹೇಳಿದ್ದಾರೆ.