ಐಎಮ್‍ಎ ವಂಚನೆ ಪ್ರಕರಣ : ಪ್ರಕರಣದಲ್ಲಿ ಶಾಮೀಲಾಗಿದ್ದ ಸಚಿವರನ್ನು ಸಂಪುಟದಿಂದ ಕೈಬಿಡಲು ರಾಜ್ಯಪಾಲರಿಗೆ ಮನವಿ – ಕಹಳೆ ನ್ಯೂಸ್
ಬಂಟ್ವಾಳ: ಬಹುಕೋಟಿ ರೂಪಾಯಿ ಐಎಮ್‍ಎ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯಾಸ್ಪದ ಸಚಿವರನ್ನು ಕೈ ಬಿಡಲು ಮುಖ್ಯಮಂತ್ರಿಗೆ ಸೂಚಿಸುವಂತೆ ಬಂಟ್ವಾಳ ತಾ.ಪಂ ಸದಸ್ಯ ಪ್ರಭಾಕರ ಪ್ರಭು ಅವರು ಕರ್ನಾಟಕ ರಾಜ್ಯಪಾಲರಾದ ವಜುಭಾಯಿ ವಾಲಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಾವಿರಾರು ಕೋಟಿ ವಂಚಿಸಿರುವ ಐಎಮ್‍ಎ ಸಂಸ್ಥೆಯಲ್ಲಿ, ರಾಜ್ಯದ ಸಾವಿರಾರು ಮಂದಿ ಅಮಾಯಾಕರು ತಮ್ಮ ಹತ್ತಾರು ಆಸೆ, ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂ.ಹಣವನ್ನು ಹೂಡಿಕೆ ಮಾಡಿದ್ದಾರೆ. ದೇಶ, ವಿದೇಶಗಳಲ್ಲದೆ, ಕರಾವಳಿಯ ಭಾಗದಿಂದಲೂ ಹಲವು ಮಂದಿ ಹಣ ಹೂಡಿಕೆ ಮಾಡಿ ಈಗ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ದಿನಂಪ್ರತಿ ಸಾವಿರಾರು ಮಂದಿ ದೂರು ನೀಡಿ ಹಣ ಮರುಪಾವತಿಗಾಗಿ, ಕಚೇರಿಗೆ ಅಲೆದು ದೃಶ್ಯ ಮಾದ್ಯಮಗಳ ಮುಂದೆ ತಮ್ಮ ಕುಟುಂಬದ ನೋವು ತೊಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಮನವಿಯಲ್ಲಿ ಅವರು ಅಳಲನ್ನು ತೋಡಿಕೊಂಡಿದ್ದಾರೆ.
ವಂಚನೆಗೊಳಪಟ್ಟವರಲ್ಲಿ ಈಗಾಗಲೇ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನುಳಿದಂತೆ ಸುಮಾರು 43,000 ಕುಟುಂಬ ತೀವ್ರ ಸಂಕಟ ಅನುಭವಿಸುತ್ತಿರುವುದನ್ನು ನೋಡಿ ದೇಶದ ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವರು ಕೂಡ ಈ ಪ್ರಕರಣವನ್ನು ಅತೀ ಸೂಕ್ಷ್ಮ ರೀತಿಯಲ್ಲಿ ಗಮನಿಸುತ್ತಿದ್ದಾರೆ. ಹಾಗೆ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೇಂದ್ರಕ್ಕೆ ವರದಿ ನೀಡಲು ರಾಜ್ಯಕ್ಕೆ ನಿರ್ದೇಶನ ನೀಡಿರುತ್ತಾರೆ ಎಂದು ರಾಜ್ಯಪಾಲರಿಗೆ ರವಾನಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.
ಐಎಮ್‍ಎ ವಂಚನೆ ಪ್ರಕರಣ ಕರ್ನಾಟಕ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದು, ಗಂಭೀರ ಸ್ವರೂಪದ ಈ ಪ್ರಕರಣ ರಾಜ್ಯದ ಇತಿಹಾಸದಲ್ಲಿಯೇ, ದೊಡ್ಡ ಪ್ರಮಾಣದ ಹಗರಣಗಳಲ್ಲಿ ಒಂದಾಗಿದೆ ಎಂದು ಪ್ರಭು ಮನವಿಯಲ್ಲಿ ತಿಳಿಸಿದ್ದಾರೆ.
ಐ.ಎಮ್.ಎ.ಜುವ್ಯೆಲ್ ಸಂಸ್ಥೆಯ ಮಾಲಿಕ, ಬಹು ಕೋಟಿ ವಂಚಕ ಮಹಮ್ಮದ್ ಮನ್ಸೂರ್ ಖಾನ್ ನೊಂದಿಗೆ ರಾಜ್ಯದ ಪ್ರಭಾವಿ ಸಚಿವರೊಬ್ವರ ಮತ್ತು ಶಾಸಕರೋರ್ವರ ಹೆಸರು ಥಳಕು ಹಾಕಿರುವ ಬಗ್ಗೆ ರಾಜ್ಯದ ಹಲವು ದೃಶ್ಯ ಮಾದ್ಯಮಗಳಲ್ಲಿ ಭಿತ್ತರವಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಕರ್ನಾಟಕ ಸರಕಾರದ ಮೇಲೆ ಸಂಶಯ ಮೂಡುವಂತಾಗಿದೆ. ಅಲ್ಲದೆ ಪ್ರಭಾವಿಗಳ ಸಹಕಾರದಿಂದಾಗಿಯೇ ಇಂತಹ ದೊಡ್ದ ಮೊತ್ತ ವಂಚಿಸಲು ಐಎಮ್‍ಎ ಸಂಸ್ಥೆಗೆ ಸಾಧ್ಯವಾಯಿತು ಎಂದು ರಾಜ್ಯದ ಜನ ಮಾತಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ.
ರಾಜ್ಯದಲ್ಲಿ ಇಂತಹದೇ ಹಲವು ಸಂಸ್ಥೆಗಳು ಕಾರ್ಯಚರಿಸುತ್ತಿದ್ದು, ಅದರ ಬಗ್ಗೆಯೂ ಸರಕಾರ ತೀವ್ರ ನಿಗಾ ವಹಿಸಬೇಕಾಗಿದ್ದು, ಕರ್ನಾಟಕದ ಸಮ್ಮಿಶ್ರ ಸರಕಾರ ಅಧಿಕಾರ ಉಳಿಸಿಕೊಳ್ಳಲು ಕಾಲಹರಣ ಮಾಡುತ್ತಿದೆಯೇ ಹೊರತು ನೊಂದವರಿಗೆ ನೆರವಾಗುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಭಾಕರ ಪ್ರಭು ರಾಜ್ಯದ ಪರಿಸ್ಥಿತಿಯನ್ನು ಕೇಂದ್ರಕ್ಕೆ ರವಾನಿಸಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಯವರಿಗೆ ಸಲಹೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.