ಉಪ್ಪಿನಂಗಡಿ ; ವಿಶ್ವ ಹಿಂದೂ ಪರಿಷತ್, ಭಜರಂಗದಳ ಕರಾಯ ಹಾಗೂ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಸಮಿತಿ ಕರಾಯ ಇದರ ಸಂಯುಕ್ತ ಆಶ್ರಯದಲ್ಲಿ 2ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಕರಾಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ನಡೆಯಿತು. ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಶ್ರೀ ಕೃಷ್ಣ ಭಜನ ಮಂದಿರದಿಂದ ಶೋಭಯಾತ್ರೆ ಹೊರಟು, ನಂತರ ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ ಉದ್ಘಾಟಿಸುವ ಮೂಲಕ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಿಶ್ವ ಹಿಂದೂ ಪರಿಷತ್, ಬೆಳ್ತಂಗಡಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮಂಗಳೂರಿನ ಕಾರ್ಯದರ್ಶಿ ಶರಣ್ ಪಂಪವೇಲ್ ದಿಕ್ಸೂಚಿ ಭಾಷಣ ಮಾಡಿದರು. ಈ ವೇಳೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಧ್ಯಕ್ಷರಾದ ಭಾಸ್ಕರ ಧರ್ಮಸ್ಧಳ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ಮೊಕ್ತೇಸರರಾದ ಅನಂತಕೃಷ್ಣ ಕುದ್ದಣ್ಣಾಯ, ಶ್ರೀ ಕೃಷ್ಣ ಭಜನಾ ಮಂದಿರ ಕರಾಯದ ಅಧ್ಯಕ್ಷ ಜಗದೀಶ ಶೆಟ್ಟಿ ಮೈರಾ ಉಪಸ್ಧಿತರಿದ್ದರು. ಈ ವೇಳೆ ನಿವೃತ್ತ ವೃತ್ತ ನಿರೀಕ್ಷಕ ಸುದರ್ಶನ್ ಎಂ. ಕೊಲ್ಲಿ, ನಿವೃತ್ತ ಶಾರೀರಿಕ ಶಿಕ್ಷಕ ಬೊಮ್ಮಯ್ಯ ಬಂಗೇರ, ನಿವೃತ್ತ ಕ.ರಾ.ರ.ಸಾ.ಸಂಸ್ಧೆ ಚಾಲಕ ಸೀತಾರಾಮ ಗೌಡ ಇವರನ್ನ ಸನ್ಮಾನಿಸಲಾಯಿತು.
ಕೆಸರ್ಡ್ ಒಂಜಿ ದಿನದಲ್ಲಿ ಊರಿನ ಜನತೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಹಗ್ಗಾ ಜಗ್ಗಾಟ, ಸಂಗೀತ ಕುರ್ಚಿ, ಮಡಕೆ ಹೊಡೆಯುವುದು, ಕೆಸರಿನಲ್ಲಿ ಓಟ ಮುಂತಾದ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಧ್ಯಾಹ್ನ ಹಳ್ಳಿ ಸೊಗಡಿನ ರುಚಿ ರುಚಿಯಾದ ಊಟ ತಯಾರಾಗಿತ್ತು, ಅಂತೆಯೆ ಸಂಜೆ ನೆರೆದ ಜನರಿಗೆ ಉಪಹಾರದ ವ್ಯವಸ್ಧೆಯನ್ನು ಮಾಡಲಾಗಿತ್ತು. ಊರ ಹಾಗೂ ಪರವೂರ ಜನತೆ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.