ಒಡಿಶಾ: ಇತ್ತೀಚಿಗೆ ದೇಶದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿದ್ದು, ಒಡಿಶಾದಲ್ಲಿಯೂ ಸರಿಸುಮಾರು ಒಂದು ಸಾವಿರ ಸರ್ಕಾರಿ ಶಾಲೆ ಸರ್ಕಾರವೇ ಮುಚ್ಚಲು ಮುಂದಾಗಿದೆ. ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ ಅಭಾವದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಒಡಿಶಾ ರಾಜ್ಯದ 996 ಶಾಲೆಗಳಲ್ಲಿ ಹತ್ತಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಕೆಲವು ಶಾಲೆಗಳಲ್ಲಿ 3-4 ವಿದ್ಯಾರ್ಥಿಗಳಷ್ಟೇ ಇದ್ದಾರೆ. ಹೀಗಾಗಿ ಆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್ ತಿಳಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಶಿಕ್ಷಕರ ನೇಮಕ ಹಾಗೂ ಶಾಲೆಗಳಿಗೆ ಅಗತ್ಯ ಸೌಕರ್ಯ ಒದಗಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಹೀಗಾಗಿ ಆ ಶಾಲೆಗಳನ್ನು ಮುಚ್ಚಿ ಸಮೀಪದ ಶಾಲೆಗಳಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅಲ್ಲದೆ ಸ್ಥಳಾಂತರಗೊಳ್ಳುವ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಅವರ ಹಾಜರಾತಿಗೆ ಅನುಗುಣವಾಗಿ 3, 4, 6 ಸಾವಿರ ರೂ. ಸಾರಿಗೆ ಭತ್ಯೆ ಕೊಡಲು ನಿರ್ಧರಿಸಿದೆ ಎಂದಿದ್ದಾರೆ.