Tuesday, January 21, 2025
ಸುದ್ದಿ

ಟ್ರೋಲ್ ಮಗಾ ಅಡ್ಮಿನ್ ಬಂಧನ, ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್! – ಕಹಳೆ ನ್ಯೂಸ್

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಈ ರಾಜ್ಯದಲ್ಲಿ ಕಾನೂನಿನ ಆಡಳಿತದ ಬದಲು ಪೊಲೀಸ್‍ರಾಜ್ಯ ನಡೆಯುತ್ತಿದೆ ಎಂದು ಹೈಕೋರ್ಟ್, ಕರ್ನಾಟಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖೀಲ್ ಕುಮಾರಸ್ವಾಮಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸಿದ್ದಕ್ಕೆ ‘ಟ್ರೋಲ್ ಮಗಾ’ ಫೇಸ್‍ಬುಕ್‍ನ ಅಡ್ಮಿನ್ ಜಯಕಾಂತ್‍ಗೆ ಅಧೀನ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದ್ದರೂ ಆತನನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಿರುವುದಕ್ಕೆ ಸರಕಾರದ ವಿರುದ್ಧ ಹೈಕೋರ್ಟ್ ಕೆಂಡ ಕಾರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಪಿ.ಎಸ್. ದಿನೇಶ್‍ಕುಮಾರ್, ಜಯಕಾಂತ್‍ನನ್ನು ಈ ಕೂಡಲೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಗೊಳಿಸಬೇಕು. ಅಲ್ಲದೆ ಬಿಡುಗಡೆ ಪ್ರಕ್ರಿಯೆ ಮುಗಿದ ಬಳಿಕ ಹೈಕೋರ್ಟ್ ರಿಜಿಸ್ಟ್ರಾರ್ ಮೂಲಕ ಪಾಲನಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್‍ಬುಕ್ ಪ್ರಕರಣದಲ್ಲಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿರುವಾಗ ಅದರ ಮರುದಿನವೇ ಅಂತಹದ್ದೇ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸುವ ತುರ್ತು ಪೊಲೀಸರಿಗೇನಿತ್ತು. ಯಕಃಶ್ಚಿತ್ ಇದೊಂದು ಫೇಸ್‍ಬುಕ್ ಪ್ರಕರಣವಷ್ಟೇ ಅಲ್ಲವೇ? ಅಧೀನ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ? ಇದು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಇಲ್ಲ ಎಂಬ ಭಾವನೆ ತರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಈ ರಾಜ್ಯದಲ್ಲಿ ಕಾನೂನಿನ ಆಡಳಿತದ ಬದಲು ‘ಪೊಲೀಸ್ ರಾಜ್ಯ’ ಇರುವಂತಿದೆ. ಹೀಗಾದರೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದಕ್ಕೂ ಕಷ್ಟವಾಗಲಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ನ್ಯಾಯಮೂರ್ತಿಗಳು ಕುಮಾರಸ್ವಾಮಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.