ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದ ಸೇತುವೆ: ಕುಸಿದು ವರ್ಷ ಸಂದರು ಸೇತುವೆಯ ಭರವಸೆ ಮಾತ್ರ ಹುಸಿ – ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ. ಮಂಗಳೂರು ತಾಲೂಕಿಗೆ ಒಳಪಟ್ಟ ಕುಪ್ಪೆಪದವು ಬಳಿಯ ಮುಲ್ಲರಪಟ್ಣ ಸೇತುವೆ, ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದ ಬಳಿಕ ಅಲ್ಲಿನ ಜನರ ಸ್ಥಿತಿ ದೈನೇಸಿಯಾಗಿದೆ. ಶಾಲಾ ಮಕ್ಕಳ ಪಾಡಂತೂ ಹೇಳತೀರದು. ಕತ್ತಿಯ ಅಲಗಿನಲ್ಲಿ ನಿಂತು ಸರ್ಕಸ್ ಮಾಡುವಂತಾಗಿದೆ. ಎರಡು ತಾಲೂಕುಗಳನ್ನು ಸಂಪರ್ಕಿಸುವ ಸಂಪರ್ಕ ಸೇತುವೆಯಾಗಿದ್ದು, ನದಿಗೆ ಅಡ್ಡಲಾಗಿ ಸಾಗುವ ರಾಜ್ಯ ಹೆದ್ದಾರಿಯ ಸಂಪರ್ಕ ಕೊಂಡಿಯಾಗಿದ್ದ ಸ್ವಾತಂತ್ರ್ಯ ಕಾಲದ ಸೇತುವೆ ಕಳೆದ ಮಳೆಗಾಲದಲ್ಲಿ ತುಂಡಾಗಿ ಬಿದ್ದಿತ್ತು. ಆದರೆ, ಅಂದಿನ ಮಳೆ ಮುಗಿದು ವರ್ಷದ ಬಳಿಕ ಮತ್ತೆ ಮಳೆ ಹನಿಯುತ್ತಿದೆ. ಅಲ್ಲಿನ ಜನರ ಪಾಡು ಮಾತ್ರ ಒಂದೇ ವರ್ಷದಲ್ಲಿ ನರಕವಾಗಿ ಬಿಟ್ಟಿದೆ.
ಕಳೆದ ಬಾರಿ ಸೇತುವೆ ಕುಸಿದು ಬಿದ್ದಾಗ, ಜನಪ್ರತಿನಿಧಿಗಳು ಒಂದೇ ವರ್ಷದಲ್ಲಿ ಸೇತುವೆ ಕಟ್ಟಿಕೊಡುವ ಮಾತಾಡಿದ್ದರು. ಸೇತುವೆ ಕುಸಿದು ಮತ್ತೊಂದು ವರ್ಷ ಸಂದು ಹೋಗಿದೆ. ಸೇತುವೆಯ ಭರವಸೆ ಮಾತ್ರ ಹುಸಿಯಾಗಿದೆ. ಬಂಟ್ವಾಳ ಮತ್ತು ಮಂಗಳೂರು ಭಾಗದ ಶಾಸಕರು ಬದಲಾಗಿದ್ದಾರೆ. ಹೊಸ ಸೇತುವೆ ಕಟ್ಟಿಕೊಟ್ಟು ಜನರ ಸಮಸ್ಯೆಗೆ ಸ್ಪಂದಿಸೋರು ಇಲ್ಲವಾಗಿದೆ. ಹೀಗಾಗಿ ನಮ್ಮ ಕಷ್ಟ ಯಾರಲ್ಲಿ ಹೇಳಿಕೊಳ್ಳಬೇಕು ಎಂದು ಜನರು ಹೇಳುತ್ತಾರೆ.
ದಿನವೂ ಶಾಲೆಗೆ ಹೋಗೋ ಮಕ್ಕಳು ಸೇರಿದಂತೆ ಅಲ್ಲಿನ ಜನರು ಇದೇ ನದಿಯ ಮೇಲಿನ ರಸ್ತೆಯಲ್ಲಿ ಇಳಿದು ಹೋಗುತ್ತಿದ್ದರು. ಸೇತುವೆ ಕಡಿದುಕೊಂಡ ಬಳಿಕ ನದಿಗೆ ಮಣ್ಣು ತುಂಬಿ ಮಾಡಿಕೊಂಡಿದ್ದ ರಸ್ತೆಯಲ್ಲೇ ವಾಹನಗಳು ಸಾಗುತ್ತಿದ್ದವು. ಆದರೆ, ಈಗ ಮತ್ತೆ ಮಳೆ ಶುರುವಾಗಿದ್ದರಿಂದ ಅಲ್ಲಿನ ಜನರಲ್ಲಿ ನಡುಕ ಶುರುವಾಗಿದೆ. ಯಾವಾಗ ರಸ್ತೆ ಕೊಚ್ಚಿಹೋಗುತ್ತೆ ಎನ್ನುವ ಭಯದಿಂದಲೇ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಅಲ್ಲೇ ಪಕ್ಕದಲ್ಲಿರುವ ಶಾಲೆಗೆ ಹೋಗುವ ಮಕ್ಕಳಿಗೆ ಇದೇ ಸಂಪರ್ಕ ರಸ್ತೆಯಾಗಿದ್ದರಿಂದ ಅಲ್ಲಿನ ಸ್ಥಿತಿ ಅಪಾಯ ಆಹ್ವಾನ ನೀಡುವಂತಿದೆ.
ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಎತ್ತಿದ್ದರಿಂದ ಪಿಲ್ಲರ್ ಗೆ ಹಾನಿಯಾಗಿ ಸೇತುವೆ ಕುಸಿದು ಬಿದ್ದಿತ್ತು ಎನ್ನುವ ಮಾತು ಕೇಳಿಬಂದಿತ್ತು. ಮರಳು ಮಾಫಿಯಾಗಳಿಂದಲೇ ಚಂದಾ ಎತ್ತಿ ಸೇತುವೆ ನಿರ್ಮಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿತ್ತು. ಆದರೆ ಜಿಲ್ಲಾಡಳಿತ ಮಾತ್ರ ಸ್ಥಳೀಯ ನಿವಾಸಿಗಳ ಮಾತಿಗೆ ಕಿವಿಕೊಟ್ಟಿಲ್ಲ. ಸೇತುವೆಯನ್ನು ನಿರ್ಮಿಸುವ ಗೊಡವೆಗೂ ಹೋಗಿಲ್ಲ. ಹೀಗಾಗಿ ಮತ್ತೆ ನದಿ ಭೋರ್ಗರೆಯುವ ಹಂತಕ್ಕೆ ಬಂದಾಗ, ಜನರು ಕಷ್ಟಪಡಬೇಕಿದೆ. ಸೇತುವೆ ಕುಸಿಯುವ ಮುನ್ನವೇ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿ ತರಾಟೆಗೆ ತೆಗೆದುಕೊಂಡಿದ್ದರು.