ಪುತ್ತೂರು: ಪುತ್ತೂರಿನ ಮಹಾವೀರ ಆಸ್ಪತ್ರೆಯ ಸಮೀಪವಿರುವ ಚರಂಡಿಯು ಮರದ ದಿಮ್ಮಿಗಳಿಂದ ಸೇರಿಕೊಂಡು ನೀರು ಹರಿಯದೇ, ಚರಂಡಿ ಸಮೀಪವಿರುವ ಅಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಮತ್ತು ಅಲ್ಲಿಗೆ ಬರುವ ಗ್ರಾಹಕರಿಗೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಎರಡು ವರ್ಷಗಳಿಂದ ನಗರಸಭೆ ಮತ್ತು ಆರೋಗ್ಯ ಇಲಾಖೆಗೆ ನಿರಂತರ ದೂರು ದಾಖಲಿಸಿದ್ದರೂ ಕ್ಯಾರೇ ಅನ್ನುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಈ ಬಗ್ಗೆ ಅಲ್ಲಿನ ಸ್ಥಳೀಯರನ್ನು ವಿಚಾರಿಸಿದಾಗ ಸಂಬಂಧಪಟ್ಟ ಅಧಿಕಾರಿಗಳು ನವರಂಧ್ರ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇನ್ನು ಚರಂಡಿಯಲ್ಲಿ ನಿಂತ ನೀರಿನಿಂದಾಗಿ, ಡೆಂಗ್ಯೂ-ಮಲೇರಿಯಾದಂತಹ ಮಾಹಾಮಾರಿಗಳಿಗೆ ಕಾರಣವಾಗುತ್ತಿದೆ. ಈ ವರ್ಷ ಸಕಾಲಕ್ಕೆ ಮಳೆಯಾಗದೇ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಒಂದೆರೆಡು ದಿನಗಳಿಂದ ಮಳೆಯ ಪ್ರಮಾಣ ಜೋರಾಗಿದ್ದು ಚರಂಡಿಯಲ್ಲಿ ನೀರು ಹರಿಯದೆ ರಸ್ತೆಗೆ ಉಕ್ಕಿ ಬರುವ ಸಾಧ್ಯತೆ ದಟ್ಟವಾಗಿದೆ.
ಈ ಬಗ್ಗೆ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿಯನ್ನು ವಿಚಾರಿಸಿದಾಗ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಮತ್ತು ಬೊಳ್ವಾರಿನ ಚರಂಡಿಯ ದುರಸ್ಥಿ ಕಾರ್ಯವನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಿ, ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ.
ಭಾರವಿ, ಕಹಳೆ ನ್ಯೂಸ್ ಪುತ್ತೂರು