ಕಾವೇರಿ ಕಣಿವೆ ಮಕ್ಕಳಿಗೆ ನೀರಿಲ್ಲ ; ಮಂಡ್ಯದಲ್ಲಿ ತೀವ್ರಗೊಂಡ ರೈತ ಹೋರಾಟ: ಸಂಸದೆ ಸುಮಲತಾ ಬೆಂಬಲ – ಕಹಳೆ ನ್ಯೂಸ್
ಮಂಡ್ಯ ಜಿಲ್ಲೆ.. ಅತೀ ಹೆಚ್ಚು ನೀರಾವರಿ ಜಮೀನು ಹೊಂದಿರುವ ಜಿಲ್ಲೆ. ಕೃಷಿಯೇ ಇಲ್ಲಿನ ಜನರ ಜೀವನಾಡಿ. ಆದರೆ ರಾಜ್ಯದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯೂ ಮಂಡ್ಯನೇ..! ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈಗ ನೀರಿಲ್ಲದೆ ಬೆಳೆ ಒಣಗಿದ್ರೆ ಮತ್ತಷ್ಟು ರೈತರು ಆತ್ಮಹತ್ಯೆ ದಾರಿ ಹಿಡಿಯೋದು ಸುಳ್ಳಲ್ಲ.
ವಾಡಿಕೆಯಂತೆ ಮಳೆಯಾಗಿದ್ದರೆ ಮಂಡ್ಯ ಜಿಲ್ಲೆಯೀಗ ಹಸಿರಿನಿಂದ ನಳನಳಿಸಬೇಕಿತ್ತು. ಆದರೆ ಮಳೆಗಾಲ ಇನ್ನು ಆರಂಭವಾಗಿಲ್ಲ. ನಾಲೆಗಳೆಲ್ಲ ಒಣಗಿ ಕರಕಲಾಗಿದೆ. ಬೆಳೆಗೆ ನೀರಿಲ್ಲ ರೈತ ಆಕಾಶಕ್ಕೆ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ರೈತನನ್ನು ಕಡೆಗಣಿಸಿದೆ. ನೀರು ಹರಿಸಿ, ಬೆಳೆ ಉಳಿಸಿ’ ಎಂದು ಆಗ್ರಹಿಸಿ ಮಂಡ್ಯದ ರೈತರು ಬೀದಿಗಿಳಿದಿದ್ದಾರೆ. ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ರೈತರ ಬೆನ್ನಿಗೆ ನಿಲ್ಲುವುದಾಗಿ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ನಿವಾರಿಸುವಂತೆ ರೈತರು ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಕಾವೇರಿ ಮುಷ್ಕರಕ್ಕೆ ಸದಾ ನನ್ನ ಬೆಂಬಲವಿದೆ. ಈಗಾಗಲೇ 2 ಟಿಎಂಸಿ ನೀರನ್ನು ಹರಿಸುವಂತೆ ಪ್ರಧಾನ ಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಹಾಗೆಯೇ ಕೇಂದ್ರ ಜಲ ಶಕ್ತಿ ಸಚಿವರಿಗೂ ಮನವಿ ಮಾಡಿದ್ದೇನೆ ಎಂದು ಸುಮಲತಾ ಅಂಬರೀಶ್ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.
ಮಂಡ್ಯದಲ್ಲಿನ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೂ ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಹೋರಾಟನಿರತ ರೈತರು ಅಸಮಧಾನಗೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದು ಪ್ರತಿಭಟನೆ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿರುವ ಇವರು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಮುಂದಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಡಿಸಿ ಕಚೇರಿ ಸುತ್ತ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.