ಶೆರಿನ್ ಮ್ಯಾಥ್ಯೂಸ್ ಎಂಬ ಮೂರು ವರ್ಷದ ಮಗುವಿನ ಹತ್ಯೆ: ತಂದೆ ವೆಸ್ಲಿ ಮ್ಯಾಥ್ಯೂಸ್‌ಗೆ ಜೀವಿತಾವಧಿ ಶಿಕ್ಷೆ – ಕಹಳೆ ನ್ಯೂಸ್
ಡಲ್ಲಾಸ್: ಅಮೆರಿಕದ ಟೆಕ್ಸಾಸ್‌ನಲ್ಲಿ ಎರಡು ವರ್ಷಗಳ ಹಿಂದೆ ಭಾರತ ಮೂಲದ ಶೆರಿನ್ ಮ್ಯಾಥ್ಯೂಸ್ ಎಂಬ ಮೂರು ವರ್ಷದ ಮಗುವಿನ ಹತ್ಯೆಗೆ ಕಾರಣವಾಗಿದ್ದ ಆಕೆಯ ಇಂಡೋ-ಅಮೆರಿಕನ್ ಮಲ ತಂದೆ ವೆಸ್ಲಿ ಮ್ಯಾಥ್ಯೂಸ್‌ಗೆ(39) ಡಲ್ಲಾಸ್‌ನ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ವಿಧಿಸಿದೆ.
ಬಿಹಾರದ ಅನಾಥರ ಆಶ್ರಮವೊಂದರಲ್ಲಿ ಇದ್ದ ಮೂಲತಃ ಸರಸ್ವತಿ ಎಂಬ ಹೆಸರಿನ ಈ ಮಗುವನ್ನು 2016ರಲ್ಲಿ ಮಗುವನ್ನು ಟೆಕ್ಸಾಸ್‌ನ ವೆಸ್ಲಿ ಮ್ಯಾಥ್ಯೂಸ್, ಸಿನಿ ಮ್ಯಾಥ್ಯೂಸ್ ಎಂಬ ದಂಪತಿ ದತ್ತು ಪಡೆದಿದ್ದರು. 2017ರ ಅಕ್ಟೋಬರ್‌ನಲ್ಲಿ ಮಗು ಹಾಲು ಕುಡಿಯಲು ನಿರಾಕರಿಸಿದ್ದಕ್ಕೆ ವೆಸ್ಲಿ ತೀವ್ರವಾಗಿ ಹೊಡೆದಿದ್ದರಿಂದ ಮಗು ಅಸುನೀಗಿತ್ತು. ಅದನ್ನು ಮುಚ್ಚಿಟ್ಟ ವೆಸ್ಲಿ, ಮಗುವನ್ನು ಚರಂಡಿ ನೀರು ಹರಿಯುವ ಸೇತುವೆಯ ಕೆಳಗೆ ಬಿಸಾಡಿ, ಮಗು ಕಾಣೆಯಾಗಿದೆ ಎಂದು ಪೊಲೀಸರಲ್ಲಿ ದೂರು ಕೊಟ್ಟಿದ್ದ.
ಈ ಪ್ರಕರಣವನ್ನು ಭೇದಿಸಿದ್ದ ಪೊಲೀಸರು 2018ರಲ್ಲಿ ವೆಸ್ಲಿಯನ್ನು ಬಂಧಿಸಿದ್ದರು. ಈ ಪ್ರಕರಣದಿಂದ ಎಚ್ಚೆತ್ತ ಭಾರತ, ಕಾನೂನಾತ್ಮಕ ದತ್ತು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿತು. ಮ್ಯಾಥ್ಯೂಸ್‌ಗೆ ಮರಣದಂಡನೆ ವಿಧಿಸಬೇಕೆಂದು ಅಧಿಕಾರಿಗಳು ವಾದಿಸಿದ್ದರೂ ಅಂತಿಮವಾಗಿ ಕೋರ್ಟ್ ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಶಿಕ್ಷೆ ನೀಡಿದೆ.