ಉಡುಪಿ: ‘ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ’ ಕಿರೀಟವನ್ನು ಉಡುಪಿ ಮೂಲದ ಪ್ರಿಯಾ ಸೆರಾವೊ ಗಿಟ್ಟಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೆಳ್ಮಣ್ಣ್ ನಲ್ಲಿ ಜನಿಸಿರುವ ಪ್ರಿಯಾ ಸೆರಾವೊ, ಮೆಲ್ಬರ್ನ್‍ನಲ್ಲಿ ನಡೆದ ‘ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಿಯಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಾನೂನು ಪದವೀಧರೆಯಾಗಿರುವ ಪ್ರಿಯಾ ಮೆಲ್ಬರ್ನ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಕಾರ್ಕಳದ ಬೆಳ್ಮಣ್ಣುವಿನಲ್ಲಿ ಜನಿಸಿದ ಇವರು ಕುಟುಂಬದ ಜೊತೆ ನಂತರ ಒಮಾನ್ ಮತ್ತು ದುಬೈಗೆ ತೆರಳಿದರು. ಅಲ್ಲೇ ಬಾಲ್ಯವನ್ನು ಕಳೆದ ನಂತರ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದರು. ಸ್ಪರ್ಧೆಯಲ್ಲಿ ಉಗಾಂಡ ಮೂಲದವರಾದ ಬೆಲ್ಲಾ ಕಸಿಂಬಾ ಎಂಬುವರು ರನ್ನರ್ ಆಗಿ ಆಯ್ಕೆಯಾದರು. 26 ವರ್ಷದ ಸೆರಾವೊ, ವಿಕ್ಟೋರಿಯಾ ವಿವಿಯ ಕಾನೂನು ಪದವೀಧರೆಯಾಗಿದ್ದು, ಆಸ್ಟ್ರೇಲಿಯಾಕ್ಕೆ 11 ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ವಲಸೆ ಹೋಗಿದ್ದರು.