Recent Posts

Monday, January 20, 2025
ಸುದ್ದಿ

ಧೈರ್ಯ ತುಂಬಿದ ದಂತ ವೈದ್ಯರು ದೇವರಿಗೆ ಸಮಾನ: ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷ ಲೇಖನ – ಕಹಳೆ ನ್ಯೂಸ್

ಅದು ಜೂನ್ ತಿಂಗಳ ಆರಂಭ. ಜಿಟಿ ಜಿಟಿ ಮಳೆ. ನಾನು ಮಂಗಳೂರಿನಿಂದ ಉಪ್ಪಿನಂಗಡಿಗೆ ಬೈಕ್ ನಲ್ಲಿ ಬರುತ್ತಿದ್ದೆ. ಮಳೆ ಬರುತ್ತಿರುವಾಗ ದ್ವಿಚಕ್ರವಾಹನ ಸವಾರರು ಅನುಭವಿಸುವ ಕಷ್ಟ ಅನುಭವಿಸಿಯೇ ತಿಳಿಯಬೇಕು. ಅಂತೆಯೇ ನಾನು ಸತ್ತಿಕಲ್ಲು ಎಂಬಲ್ಲಿ ಬರುತ್ತಿರುವಾಗ ರಸ್ತೆಯ ಹಂಪ್ಸ್ ನಿಂದಾಗಿ, ನನ್ನ ಬೈಕ್ ಚಾಲನೆಯ ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಹೆಲ್ಮೆಟ್ ಧರಿಸಿದ್ದರಿಂದ, ನನ್ನ ಹೆಲ್ಮೆಟ್ ಮುಖದಲ್ಲಿ ಜಾಮ್ ಆಗಿತ್ತು. ಹೆಲ್ಮೆಟನ್ನು ಸ್ಥಳೀಯರ ಸಹಾಯದಿಂದ ತೆಗೆಯಲಾಯಿತು. ಆದರೆ ತೆಗೆಯುವಾಗ ವಿಪರಿತ ರಕ್ತಸ್ರಾವವಾಗಿ ನನ್ನ ಸುಮಾರು 5 ಹಲ್ಲುಗಳು ನನ್ನ ಕೈಯಲ್ಲಿ ಕಿತ್ತು ಬಂದವು. ಅಲ್ಲಿಯ ಸ್ಥಳೀಯ ಆಟೋ ಡ್ರೈವರ್ ನನ್ನನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಮನಸ್ಸಿನಲ್ಲಿ ಏನೋ ಭಯ-ಆತಂಕ. ನನ್ನನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು. ವೈದ್ಯರು ಬರುವವರೆಗೂ ಪ್ರಥಮ ಚಿಕಿತ್ಸೆ ಮುಂದುವರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟರಲ್ಲಿ ವೈದ್ಯರು ಆಗಮಿಸಿ ಸಮಾಧಾನದಿಂದ ಏನಾಯ್ತು, ಹೇಗಾಯ್ತು? ಹೆಲ್ಮೆಟ್ ಧರಿಸಿಲ್ಲವೇ… ಎಂದು ಕೇಳಿದರು. ನಾನು ಹೇಳಿದೆ, ಹೆಲ್ಮೆಟ್ ಧರಿಸಿದ್ದೆ ಸರ್ ಎಂದು. ವೈದ್ಯರು ನನ್ನ ಮಾತಿನಲ್ಲಿ ಇದ್ದ ಅತಂಕವನ್ನು ಗಮನಿಸಿದರು. ನೀವೇಕೆ ನಡುಗುತ್ತಿದ್ದೀರಿ.. ಹೇದರಬೇಡಿ.. ಎಂದು ಧೈರ್ಯ ಹೇಳಿ ಎರಡು ಚುಚ್ಚುಮದ್ದು ನೀಡಿ, ಸ್ಕಾನಿಂಗ್ ಮಾಡಲು ಕರೆದುಕೊಂಡು ಹೋದ್ರು.

ಸ್ವಲ್ಪ ಸಮಯದ ನಂತರ ಬಂದ ವೈದ್ಯರು ನನ್ನನ್ನು ನೋಡಿ ಹೇಗಿದ್ದಿರಿ ಎಂದು ಬೆನ್ನಿಗೆ ತಟ್ಟಿ ಕೇಳಿದ್ರು. ಸ್ಕಾನಿಂಗ್ ರಿಪೋರ್ಟ್ ನೋಡಿ ನನ್ನ ಮನೆಯವರನ್ನು ಕರೆದು, ಇವರ ಹಲ್ಲು ಮತ್ತು ದವಡೆ ನಜ್ಜುಗೊಂಡಿವೆ. ನಮ್ಮ ಆಸ್ಪತ್ರೆಯಲ್ಲಿ ದಂತ ಶಸ್ತ್ರಚಿಕಿತ್ಸಕರು ಇಲ್ಲ ಇದ್ದಕ್ಕೆ ಪುತ್ತೂರಿನಿಂದ ದಂತ ವೈದ್ಯರನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡುತ್ತೆವೆ ಎಂದರು.
ಅಷ್ಟರಲ್ಲಿ ಕೆಲವು ನನ್ನ ಸ್ನೇಹಿತರು, ಸಂಬಂಧಿಕರು ಬಂದು ಹಲ್ಲು ತೆಗೆಸಬೇಡಿ ಮುಂದಕ್ಕೆ ಬಹಳ ಕಷ್ಟ ಎಂದು ಹೇಳಿ ನನ್ನನ್ನು, ನನ್ನ ಮನೆಯವರನ್ನು ಹೆದರಿಸಿದರು. ಮರುದಿನ ಬೆಳಿಗ್ಗೆ ಸುಮಾರು 4:30ಕ್ಕೆ ವೈದರು ಮತ್ತು ಅವರ ಸಹಾಯಕರು ಬಂದು ಮಾತನಾಡಿಸಿದರು. ವೈದ್ಯರ ಬಳಿ ನೇರವಾಗಿ ಕೇಳಿದೆ ಸರ್ ಮುಂದಕ್ಕೆ ಹಲ್ಲು ಬರುವುದಿಲ್ಲವಾ..?? ಹಲ್ಲು ಕಿತ್ತರೆ ಮುಂದಕ್ಕೆ ಸಮಸ್ಯೆ ಯಾಗುತ್ತದೆಯೇ ಎಂದು.

ವೈದ್ಯರು ನಗುತ್ತಾ ಹೇಳಿದ್ರು ಹಲ್ಲು ಇನ್ನೂ ಬರುವುದಿಲ್ಲ. ನಾನು ಶಸ್ತ್ರಚಿಕಿತ್ಸೆ ನಡೆಸಿ ನಿಮಗೆ ಕೃತಕ ಹಲ್ಲನ್ನು ಜೋಡಿಸುವ ವ್ಯವಸ್ಥೆ ಮಾಡುತ್ತೆನೆ. ನೀವು ಹೆದರಬೇಡಿ. ನಾನು ಇಂತಹ ಹಲವಾರು ಕೇಸ್‍ಗಳನ್ನು ನೋಡಿದ್ದೇನೆ. ನಿಮ್ಮ ಹಲ್ಲನ್ನು ನಾನು ಸರಿ ಮಾಡಿ ಕೊಡುವೆ ಎಂದರು. ನನಗೆ ಸ್ವಲ್ಪ ಧೈರ್ಯ ಬಂತು. ವೈದ್ಯರು ಶಸ್ತ್ರಚಿಕಿತ್ಸಾ ಓ.ಪಿ. ಸೆಕ್ಷನ್‍ಗೆ ನನ್ನನ್ನು ಕರೆದೊಯ್ದರು.

ಸಂಜೆ 5 ಗಂಟೆ ಸುಮಾರಿಗೆ ಪ್ರಜ್ಞೆ ಬಂತು ಮಾತನಾಡಲು ಸಾಧ್ಯವಿಲ್ಲ ಸಂಪೂರ್ಣ ಬಾಯಿಗೆ ಮಾತನಾಡದಂತೆ ಹೊಲಿಗೆ ಹಾಕಲಾಗಿತ್ತು. ಎಲ್ಲಾ ಕೈ ಸನ್ನೆಯಲ್ಲೇ.. ನನಗೆ ಮನಸ್ಸಿಗೆ ಬಹಳಷ್ಟು ಬೇಸರವಾಯಿತು. ಛೇ ಮಾತನಾಡಲು ಸಾಧ್ಯವಾಗದೆ ಹೋಯಿತೇ ಎಂದು. ಮರುದಿನ ವೈದ್ಯರು ಬಂದರು ನನ್ನನ್ನು ಇನ್ನೊಂದು ಕೊಠಡಿಗೆ ಬರಲು ತಿಳಿಸಿದ್ರು ಬಹಳಷ್ಟು ಖುಷಿಯಿಂದ ಹೋದೆ ಹೊಲಿಗೆ ತೆಗೆಯಬಹುದು ಎಂದು.

ವೈದ್ಯರು ಬಾಯಿಯನ್ನು ನೋಡಿ… ನಿಮ್ಮನು ಇವತು ಡಿಸ್ಚಾರ್ಜ್ ಮಾಡುತ್ತೇನೆ. ನಿಮ್ಮ ಹಲ್ಲಿನ ಹೊಲಿಗೆ 21 ದಿನಗಳ ನಂತರ ತೆಗೆಯುತ್ತೆವೆ ಎಂದ್ರು. ನಾನು ಕೈಸನ್ನೆಯಲ್ಲೇ ಕೇಳಿದೆ. ಊಟ ಮಾಡುವುದು ಹೇಗೆ ಎಂದು. ಊಟ ಮಾಡುವ ಹಾಗೇ ಇಲ್ಲ. ಹಣ್ಣುಗಳನ್ನು ಜ್ಯೂಸ್ ಮಾಡಿ ಸಣ್ಣ ಪೈಪ್ ಮುಖಾಂತರ ಕುಡಿಯಿರಿ ಎಂದು ಹೇಳಿದರು. ನಾನು ದಿನಗಳನ್ನು ಎಣಿಸುತ್ತಾ..21 ದಿನಗಳ ನಂತರ ವಾಪಸ್ಸು ನಾನು ವೈದ್ಯರ ಬಳಿ ತೆರಳಿದೆ.

ಹಲ್ಲಿನ ಹೊಲಿಗೆ ಬಿಚ್ಚಿಸಿ, ಗಟ್ಟಿಯಾದ ವಸ್ತು ತಿನ್ನಬೇಡಿ ಎಂದ್ರು. ಒಂದು ತಿಂಗಳು ಕಳೆದು ಮತ್ತೆ ಬನ್ನಿ ಎಂದರು. ನಂತರ ತೆರಳಿದಾಗ ರೋಟ್ ಕೆನಲ್ ಮಾಡಿಸಿ 2 ತಿಂಗಳ ನಂತರ ಒಂದು ಹಲ್ಲಿನ ಸೆಟ್ ಇಟ್ಟು ಮೊದಲಿಗೆ ನನಗೆ ಕನ್ನಡಿ ಕೊಟ್ಟು ಕೇಳಿದ್ರು ಹೇಗಿದೆ ಹಲ್ಲು ಎಂದು. ತುಂಬ ಖುಷಿಯಿಂದ ಚೆನ್ನಾಗಿದೆ ಎಂದು ಖುಷಿ ಪಟ್ಟೆ. ಕೊನೆಗೂ ಅವರು ಖುಷಿಯಿಂದ ಬೆನ್ನು ತಟ್ಟಿ ಹೇಳಿದರು ಇನ್ನೂ ಎಷ್ಟೋ ಬೇಕಾದರು ತಿನ್ನಿ ಎಂದು.

ಆದರೆ, ಈಗಲೂ ನನಗೆ ದಂತ ಚಿಕಿತ್ಸೆ ಎಂದರೆ ಭಯವಾಗುತ್ತದೆ. ಅವತ್ತು ವೈದ್ಯರು ನನಗೆ ಹೇಳಿದ ಧೈರ್ಯದ ಮಾತು ನನಗೆ ಶ್ರೀರಕ್ಷೆಯಾಗಿತ್ತು. ನಂತರ ಹಲವು ಬಾರಿ ಚೆಕಪ್‍ಗೆ ತೆರಳಿದ್ದೆ. ಈಗಲೂ ವೈದರು ನನ್ನನ್ನು ನೋಡಿದಕ್ಷಣ ಬೈಕ್ನಲ್ಲಿ ತೆರಳುವಾಗ ಹಂಪ್ಸ್ ಜಾಗ್ರತೆ ಎಂದು ಸಣ್ಣಗೆ ನಗೆ ಬಿರುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಒಬ್ಬ ಯಾವುದೇ ತರಹದ ರೋಗಿಗೆ ಅವನ ಔಷದಿಗಳ ಜೊತೆಗೆ ವೈದ್ಯರ ಧೈರ್ಯದ ಮಾತು ಅತೀ ಮುಖ್ಯ. ಏನೇ ಇರಲಿ ಸಮಾಜದಲ್ಲಿ ವೈದ್ಯರ ಪಾತ್ರ ಮಹತ್ವದ್ದು. ವೈದ್ಯರು ನಮ್ಮ ಮಾನಸಿಕ, ದೈಹಿಕ, ರೋಗ ರುಜಿನಗಳನ್ನು ಹೋಗಲಾಡಿಸಲು ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೂ ಕಾರಣಕರ್ತರು ಎಂದರೂ ತಪ್ಪಿಲ್ಲ ಅನಿಸುತ್ತದೆ. ವೈದ್ಯೊ ನಾರಯಣೋ ಹರಿಃ ಅಂದರೆ “ವೈದ್ಯರು ದೇವರ ಸಮ”. ಜಗತ್ತಿನ ಸಮಸ್ತ ವೈದ್ಯರಿಗೆ ವೈದ್ಯರ ದಿನದ ಶುಭಶಯಗಳು.
-ದಿನೇಶ್.ಬಿ.ಬೊಳ್ಳಾರ್, ಹವ್ಯಾಸಿ ಲೇಖಕಕರು