ಮಂತ್ರಿಗಿರಿಸ್ಥಾನ ಕೈ ತಪ್ಪಿದಾಗಿನಿಂದಲೂ ಪಕ್ಷ ತೊರೆಯುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಈಗಾಗಲೇ ಹಲವು ಬಾರಿ ತಮ್ಮ ಬೆಂಬಲಿಗರೊಂದಿಗೆ ಪಕ್ಷ ತೊರೆಯಲು ವಿಫಲ ಯತ್ನವನ್ನು ಮಾಡಿದ್ದರು. ಆದರೆ ಇಂದು ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಕೂಡ ರಾಜೀನಾಮೆ ನೀಡುವ ಮೂಲಕ ಮೈತ್ರಿ ಗ್ಯಾಂಗ್‍ನ ಇನ್ನೊಂದು ವಿಕೆಟ್ ಪತನವಾಗಿದೆ.
ಪಕ್ಷತೊರೆಯುವ ಕುರಿತು ಈ ಹಿಂದೆ ಮಾತನಾಡಿದ್ದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ನಾನೊಬ್ಬನೆ ಪಕ್ಷವನ್ನು ತೊರೆಯುವುದಿಲ್ಲ. ಒಬ್ಬನ ರಾಜೀನಾಮೆಯಿಂದ ಏನು ಸಾಧ್ಯವಿಲ್ಲ. ನಾನು ಒಬ್ಬನೇ ಪಕ್ಷ ಬಿಡುವುದಿಲ್ಲ. ನನ್ನ ಬೆಂಬಲಿಗರೊಂದಿಗೆ ಪಕ್ಷ ತೊರೆಯುತ್ತೇನೆ ಎಂದಿದ್ದರು.
ಬೆಳಗ್ಗೆ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಮೇಶ್ ಪಕ್ಷ ತೊರೆದಿರುವುದನ್ನು ಗಮನಿಸಿದರೆ, ಇಷ್ಟು ದಿನ ಸುಮ್ಮನಿದ್ದ ಅವರು, ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದ್ದರು ಎಂಬ ಅನುಮಾನ ಬಲವಾಗಿದೆ. ಪಕ್ಷದ ವರಿಷ್ಠರು ಎಷ್ಟೇ ಮನವೊಲಿಸಿದರು, ರಮೇಶ್ ಲೋಕಸಭಾ ಚುನಾವಣೆವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು.
ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಿದ್ದರು. ಆದರೆ, ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈಗ ರಾಜೀನಾಮೆ ಸಲ್ಲಿಸಿದ್ದು, ಇದಾದ ಬಳಿಕ ಮತ್ತೆ ಅವರು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.