ಕೊನೆಗೂ ವರುಣದೇವ ಕೃಪೆ ತೋರಿದ್ದಾನೆ. ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು ತೀರ್ಥಹಳ್ಳಿ, ಶಿವಮೊಗ್ಗ, ಉತ್ತರಕನ್ನಡ, ಕರಾವಳಿ, ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಕಳೆದ 24 ತಾಸಿನಲ್ಲಿ ಶಿವಮೊಗ್ಗದ ಅರಳಸುರಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಜೂನ್ 30ರ ಬೆಳಗ್ಗೆ 8.30ರಿಂದ ಜುಲೈ 1ರ ಬೆಳಗ್ಗೆ 8.30ರವರೆಗೆ ತೀರ್ಥಹಳ್ಳಿ ಸಮೀಪದ ಅರಳಸುರಳಿಯಲ್ಲಿ 123 ಮಿ.ಮೀನಷ್ಟು ಮಳೆಯಾಗಿದೆ.
ನೈಋತ್ಯ ಮುಂಗಾರು ಉತ್ತರ ಕರ್ನಾಟಕದಲ್ಲಿ ಚುರುಕಾಗಿದೆ. ಉಡುಪಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡದ ಶಿರಾಲಿ 9ಸೆಂ.ಮೀ, ಯಲ್ಲಾಪುರ-9 ಸೆಂ.ಮೀ, ಬೆಳಗಾವಿ- 9 ಸೆಂ.ಮೀ, ಲೋಂದಾ 9 ಸೆಂ.ಮೀ, ಕೊಪ್ಪ 9 ಸೆಂ.ಮೀ, ಗೋಕರ್ಣ 7ಸೆಂ.ಮೀ, ನಿಪ್ಪಾಣಿ 6 ಸೆಂ.ಮೀ, ಕಾರವಾರದಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ.
ಇನ್ನು ಮುಂಬೈನಲ್ಲಿ ಜನರು ಬೆಚ್ಚಿಬೀಳುವಷ್ಟು ಮಳೆಯಾಗುತ್ತಿದೆ. ರೈಲು ನಿಲ್ದಾಣ, ರಸ್ತೆಗಳು ಸೇರಿದಂತೆ ಎಲ್ಲೆಡೆ ನೀರು ನಿಂತಿದ್ದು ಜನರು ಪರದಾಡುವಂತಾಗಿದೆ. ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ, ಶಾಲಾ, ಕಾಲೇಜುಗಳಿಗೆ ಹೋಗುವವರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವಂತಾಗಿತ್ತು.