ಪುತ್ತೂರು : ರಾಜ್ಯಾದ್ಯಂತ ಸಂಚಲನ ಮೂಡಿಸಿದ ಮತಾಂಧರ ಪೈಶಾಚಿಕ ಕೃತ್ಯಕ್ಕೆ ನಿನ್ನೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಪುತ್ತೂರು ಬಿಜೆಪಿ ವತಿಯಿಂದ ಪುತ್ತೂರು ಬಸ್ ನಿಲ್ದಾಣದ ಬಳಿ ರಸ್ತೆ ತಡೆ ಮಾಡುವ ಮೂಲಕ ಕೊಲೆಗಾರರ ವಿರುದ್ದ ಹಾಗೂ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಬಸ್ ನಿಲ್ದಾಣದ ಬಳಿಯ ನಾಲ್ಕು ರಸ್ತೆ ಕೂಡುವ ಭಾಗದಲ್ಲಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ ಬಿಜೆಪಿಗರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರು ಮಾತನಾಡಿ ಜಿಲ್ಲೆಯಲ್ಲಿ ನಿರಂತರವಾಗಿ ಹಿಂದೂಗಳ ಹತ್ಯೆ ನಡೆಯುತ್ತಿದ್ದು ಇದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸರ್ಕಾರ ತಾಲಿಬಾನ್ ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದು ಹಿಂದೂಗಳು ಸಾವಿನ ಭಯದಿಂದ ಬದುಕುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ಧಮನ ನೀತಿ ಅನುಸರಿಸುತ್ತಿದೆ ಎಂದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಸಹಿಸಲು ಸಾದ್ಯವಿಲ್ಲ. ಈ ಎಲ್ಲಾ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ. ತಕ್ಷಣ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿಗರಾದ ಗೋಪಾಲಕೃಷ್ಣ ಹೇರಳೆ, ಶಂಭು ಭಟ್, ಶಿವರಂಜನ್ ಎಂ, ಜೀವಂದರ್ ಜೈನ್, ರಾಮದಾಸ್ ಹಾರಾಡಿ,ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.