Wednesday, November 27, 2024
ಸುದ್ದಿ

ವೈದ್ಯರು ಸಮಾಜ ಮುಖಿಯಾಗುತ್ತಿರುವುದು ಸಂತಸದಾಯಕ; ಬಿ ರಮಾನಾಥ ರೈ – ಕಹಳೆ ನ್ಯೂಸ್

ಮಂಗಳೂರು ನಗರದ ಮಾಯ ಇಂಟರ್‍ನ್ಯಾಷನಲ್ ಹೋಟೇಲ್‍ನ ಸಭಾಂಗಣದಲ್ಲಿ ಖ್ಯಾತ ದಂತ ವೈದ್ಯ, ಶಸ್ತ್ರ ಚಿಕಿತ್ಸಕ ಮತ್ತು ವೈದ್ಯ ಸಾಹಿತಿ ಡಾ: ಮುರಲೀ ಮೋಹನ್ ಚೂಂತಾರು ಇವರ 9ನೇ ಕೃತಿ “ಧನ್ವಂತರಿ” ಲೋಕಾರ್ಪಣೆಗೊಂಡಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕದ ಮಾಜಿ ಸಚಿವ ಬಿ ರಮಾನಾಥ ರೈ, ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ: ಶಾಂತರಾಮ ಶೆಟ್ಟಿ ಇವರ ಗೌರವ ಉಪಸ್ಥಿತಿಯಲ್ಲಿ ಈ ಕೃತಿ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿ, ಬಿ ರಮಾನಾಥ ರೈ ಇವರು ಮಾತನಾಡುತ್ತಾ ವೈದ್ಯರು ರೋಗದ ಚಿಕಿತ್ಸೆ ಮಾಡುವುದರ ಜೊತೆಗೆ ರೋಗವನ್ನು ತಡೆಗಟ್ಟುವ ಬಗ್ಗೆ, ಜೀವನ ಶೈಲಿ ಬದಲಾವಣೆ ಮಾಡುವ ಬಗ್ಗೆ ಜನರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಅನಿವಾರ್ಯತೆ ಇದೆ. ವೈದ್ಯರು ಜನರಿಗೆ ಮಾಹಿತಿ ನೀಡಿ ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡುವುದು ಬಹಳ ಆರೋಗ್ಯಕರ ಬೆಳವಣಿಗೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ: ಚೂಂತಾರು ಅವರ ಎಲ್ಲಾ ಕೃತಿಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು. ಅವರಿಂದ ಮತ್ತಷ್ಟು ಕೃತಿಗಳು ಹೊರ ಬರಲಿ ಎಂದು ಹಾರೈಸಿದರು.

ಅತಿಥಿಗಳಾಗಿ ಭಾಗವಹಿಸಿದ ನಿಟ್ಟೆ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ: ಶಾಂತರಾಮ ಶೆಟ್ಟಿ ಇವರು ಮಾತನಾಡಿ ಒಬ್ಬ ವೈದ್ಯ ಬರೀ ವೈದ್ಯನಾಗಿರದೆ, ಮನುಷ್ಯನಾಗಿ, ವೈದ್ಯ ಸಾಹಿತಿಯಾಗಿ ಮತ್ತು ಸಮಾಜ ಸೇವಕನಾಗಿ ಹೇಗೆ ಬದುಕಬೇಕು ಮತ್ತು ಬದುಕಬಹುದು ಎಂಬುದನ್ನು ಸಾಧಿಸಿ ತೋರಿಸಿದ ಡಾ: ಚೂಂತಾರುರವರು ಯುವ ವೈದ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ. ವೈದ್ಯ ವೃತ್ತಿಯ ಜೊತೆ ಪ್ರವೃತಿಯನ್ನು ವೈದ್ಯರು ಪೋಷಿಸಬೇಕು. ಹಾಗೆ ಮಾಡಿದರೆ ವೈದರ ಮೇಲಿನ ಒತ್ತಡ ನಿವಾರಣೆಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಆಗಬಹುದು ಎಂದು ಅಭಿಪ್ರಾಯಪಟ್ಟರು. ವೈದ್ಯರು ನಾಲ್ಕು ಗೋಡೆಗಳ ಒಳಗೆ ಸೀಮಿತವಾಗದೆ ಸಮಾಜದ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರದೀಪ್ ಕುಮಾರ್ ಕಲ್ಕುರ ಅವರು ಮಾತನಾಡಿ ಸಾಹಿತ್ಯ ಎಂಬುದು ಕೇವಲ ಕವಿಗಳ ಆಸ್ತಿಯಲ್ಲ. ಎಲ್ಲರಿಗೂ ಹಿತವಾಗುವ ಬರವಣಿಗೆಯೇ ಸಾಹಿತ್ಯ. ಗ್ರಾಮೀಣ ಪ್ರದೇಶದ ಹೊಲ ಗದ್ದೆಗಳನ್ನು ಊಳುವ ರೈತನು ಕೂಡ ಸಾಹಿತ್ಯ ಕೃಷಿ ಮಾಡುತ್ತಾನೆ. ವೈದ್ಯಕೀಯ ಸಾಹಿತ್ಯದಲ್ಲಿ ಇನ್ನಷ್ಟು ಹೆಚ್ಚು ಸಾಹಿತ್ಯದ ಕೃಷಿಯಾಗಬೇಕಾಗಿದೆ. ಹೆಚ್ಚಿನ ವೈದ್ಯರು ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ನುಡಿದರು.

ಸಮಾರಂಭದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಅಧ್ಯಕ್ಷ ಚೂಂತಾರು ಲಕ್ಷ್ಮೀ ನಾರಾಯಣ ಭಟ್ ಉಪಸ್ಥಿತರಿದ್ದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮವನ್ನು ನಿರ್ವಾಹಣೆ ಮಾಡಿದರು. ಕುಮಾರಿ ಸಿರಿ ಚೂಂತಾರು, ಸ್ನೇಹ ಚೂಂತಾರು, ಸರಸ್ವತಿ, ಅಪೂರ್ವ ಪ್ರಾರ್ಥಿಸಿದರು. ಧನ್ವಂತರಿ ಕೃತಿಯ ಲೇಖಕ ಮುರಲೀ ಮೋಹನ್ ಚೂಂತಾರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ: ರಾಜಶ್ರೀ ಮೋಹನ್ ಇವರು ಸ್ವಾಗತ ಭಾಷಣ ಮಾಡಿದರು. ಚೂಂತಾರು ಪ್ರತಿಷ್ಠಾನ ಇದರ ಟ್ರಸ್ಟಿ ಶ್ರೀ ಮಹೇಶ್ ಚೂಂತಾರು ವಂದನಾರ್ಪಣೆ ಮಾಡಿದರು. ಸುಮಾರು 150 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.