Recent Posts

Tuesday, January 21, 2025
ಸುದ್ದಿ

ಆಷಾಢಮಾಸ ಎಂದರೇನು? ಅದರ ಮಹತ್ವ ಏನು?– ಕಹಳೆ ನ್ಯೂಸ್

ಇಂದಿನಿಂದ ಆಷಾಡ ಪ್ರಾರಂಭವಾಗಿದೆ. ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ ತಿಂಗಳುಗಳ ಪೈಕಿ ನಾಲ್ಕನೆಯದು ಆಷಾಡ ಮಾಸ. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ ಪೂರ್ವಾಷಾಢಾ ಅಥವಾ ಉತ್ತರಾಷಾಢಾ ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ.

ಸೂರ್ಯ ಮಿಥುನರಾಶಿಯಲ್ಲಿರುವಾಗ ಆಷಾಢ ಪ್ರಾರಂಭವಾಗಿ ಕರ್ಕಾಟಕ ರಾಶಿಯಲ್ಲಿರುವಾಗ ಮುಗಿಯುತ್ತದೆ. ಹಲವು ವರ್ಷಗಳಿಗೊಮ್ಮೆ ಸೂರ್ಯ ಮಿಥುನರಾಶಿಯಲ್ಲಿರುವಾಗಲೇ ಮಾಸ ಮಧ್ಯದಲ್ಲಿ ಸೂರ್ಯ ಸಂಕ್ರಮಣವಿಲ್ಲದ ಚಾಂದ್ರಮಾಸ ಬರುತ್ತದೆ. ಅದನ್ನು ಅಧಿಕ ಮಾಸ ಎನ್ನುತ್ತಾರೆ. ಆ ತಿಂಗಳಿಗೆ ಅಧಿಕಾಷಾಢವೆಂದು ಹೆಸರು. ಇದು ಚೈತ್ರಾದಿ ಮಾಸಗಣನೆಯಲ್ಲಿ ನಾಲ್ಕನೆಯದಾಗುತ್ತದೆ. ಮುಂದಿನ ತಿಂಗಳೇ ನಿಜವಾದ ಆಷಾಢ. ಅಧಿಕಾಷಾಢದಲ್ಲಿ ನಿತ್ಯವಿಧಿಗಳನ್ನು ಬಿಟ್ಟು ಯಾವ ವಿಶೇಷ ಕಾರ್ಯಗಳನ್ನೂ ಮಾಡಕೂಡದು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವಾಗಿ ಈ ಮಾಸಕ್ಕೆಂದೇ ವಿಹಿತವಾದ ವ್ರತಾದಿಗಳನ್ನು ನಿಜಾಷಾಢ ಮಾಸದಲ್ಲೇ ಮಾಡಬೇಕು. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು ಶೂನ್ಯಮಾಸವೆಂದು ಪರಿಗಣಿಸುತ್ತಾರೆ. ಈ ತಿಂಗಳಿನ ಶುಕ್ಲಪಕ್ಷದ ಏಕಾದಶಿಯಂದು ದಕ್ಷಿಣಾಯನ ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಭಗವಂತನಿಗೆ ಡೋಲೋತ್ಸವ ನಡೆಯುತ್ತದೆ. ಅಂದಿನಿಂದ ಚಾತುರ್ಮಾಸ್ಯವ್ರತ ಪ್ರಾರಂಭವಾಗುತ್ತದೆ. ನವ ವಿವಾಹಿತೆ ಆಷಾಢದಲ್ಲಿ ಪತಿಯ ಗೃಹದಲ್ಲಿರದೆ ತವರು ಮನೆಯಲ್ಲಿರುತ್ತಾರೆ. ಈ ತಿಂಗಳಿನಲ್ಲಿ ಅತ್ತೆ ಸೊಸೆಯರು ಒಂದೆಡೆ ಇರಕೂಡದೆಂಬುದೇ ಇದಕ್ಕೆ ಕಾರಣ.ಇದು ಕೆಲವರಲ್ಲಿ ಮಾತ್ರ ಆಚರಣೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಷಾಢ ಮಾಸದ ಎಲ್ಲ ಶುಕ್ರವಾರಗಳಲ್ಲೂ ವಿಶೇಷ ಪೂಜೆಯುಂಟು.ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುವುದು. (ಶೂನ್ಯಮಾಸವಾದುದರಿಂದ “ಶೂನ್ಯೇ ತು ಶೂನ್ಯಂ ಫಲಮ್”)
ಇದಕ್ಕೆ ಮುಖ್ಯವಾಗಿ ಕಾರಣ ನೂರಾರು ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಠಿತವಾಗುತ್ತಿದ್ದವು.
ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಹುಳ ಹುಪ್ಪಡಿಗಳ ಸಂಚಾರ, ಅಲರ್ಜಿ ಆಗುವ ಸಾಧ್ಯತೆಗಳು ಕಾಲಲ್ಲಿ ನಂಜಿಯ ಸಾಧ್ಯತೆ ಹೀಗೆ ಹತ್ತು ಹಲವಾರು. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.

ಶಾಸ್ತ್ರದಲ್ಲಿ ಸಹ ಆಷಾಡ ಮಾಸ ಅಶುಭ ಮಾಸ ಎಂದು ಹೇಳಿಲ್ಲ. ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಮಾತ್ರ ಪದ್ಧತಿ ಇದೆ.
ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು. ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.

#ಆಷಾಢಮಾಸದ_ಮಹತ್ವ

* ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ
.* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
* ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು
.* ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ
.* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ
.* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. (ಆಟಿ ಶುಕ್ರವಾರ ಎಂದೇ ಪ್ರಸಿದ್ಧ) ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು.
* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ.
* ಇಂದ್ರನು ಗೌತಮರಿಂದ ಸಹ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ. ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.

ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ.
ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.

ಈ ಮಾಸದ ಪ್ರಮುಖ ಹಬ್ಬಗಳು
*ಪ್ರಥಮಾ (ಶಯನೀ) ಏಕಾದಶಿ; ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)
*ಗುರು ಪೂರ್ಣಿಮ/ವ್ಯಾಸ ಪೂರ್ಣಿಮ (ಹುಣ್ಣಿಮೆ)
*ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
ಭೀಮನ ಅಮಾವಾಸ್ಯೆ ವ್ರತ
ಹೀಗೆ ಆಷಾಢ ಮಾಸವು ಭಾರತೀಯ ಸಂಸ್ಕೃತಿಯೊಂದಿಗೆ ಥಳುಕು ಹಾಕಿ ತನ್ನ ವಿಶೇಷತೆಯನ್ನು ಇಂದಿಗೂ ಕಾಪಿಟ್ಟುಕೊಂಡಿದೆ.