ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಈ ಕುರಿತ ಪ್ರಸ್ತಾಪವನ್ನು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಒ ಡಾ.ಸೆಲ್ವಮಣಿ ಈ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರಿಡುವಂತೆ ನಿರ್ಣಯಿಸಿ ಕಳುಹಿಸಬೇಕೆಂದು ಆಗ್ರಹಿಸಿದರು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೆಂಪೇಗೌಡ’ರ ಹೆಸರನ್ನಿಡಲಾಗಿದೆ, ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಶಿವಾಜಿ’ ಹೆಸರನ್ನು ಮತ್ತು ಕಲ್ಕತ್ತಾ ವಿಮಾನ ನಿಲ್ದಾಣಕ್ಕೆ ‘ಸರದಾರ್ ವಲ್ಲಭಬಾಯಿ ಪಟೇಲ್’ ರವರ ಹೆಸರನ್ನಿಡಲಾಗಿದೆ. ಹಾಗೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೂ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಅಥವಾ ತುಳುನಾಡಿನ ವೀರ ಮಹಿಳೆ ರಾಣಿ ಅಬ್ಬಕ್ಕನ ಹೆಸರನ್ನು ಈ ಹಿಂದೆ ಪ್ರಸ್ತಾಪಿಸಲಾಗಿತ್ತು.
ಈಗ ಕೋಟಿ-ಚೆನ್ನಯ ಎಂಬ ಹೆಸರನ್ನಿಡಲು ನಿರ್ಧರಿಸಿದ್ದು ತುಳುನಾಡಿನ ಜನರಲ್ಲಿ ಸಂತಸವನ್ನು ತಂದಿದೆ.