71ನೇ ಇಸ್ರೇಲ್ ಸ್ವಾತಂತ್ರ್ಯ ದಿನದ ಸ್ಮರಣಾರ್ಥ ಇಸ್ರೇಲ್ ಕಂಪೆನಿಯೊಂದು ತನ್ನ ಲಿಕ್ಕರ್ ಬಾಟಲ್‍ಗಳ ಮೇಲೆ ಭಾರತದ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಪ್ರಕಟಿಸಿದ್ದು ತನ್ನ ಈ ಕೃತ್ಯದಿಂದ ಭಾರತ ಸರಕಾರ ಮತ್ತು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ತಾನು ಕ್ಷಮೆ ಕೋರುತ್ತೇನೆ ಎಂದು ಕಂಪೆನಿಯು ಹೇಳಿದೆ.
ಇಸ್ರೇಲ್ ಕಂಪೆನಿ ತನ್ನ ಲಿಕ್ಕರ್ ಬಾಟಲ್‍ಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರ ಹಾಕಿರುವುದಕ್ಕೆ ಮಂಗಳವಾರ ರಾಜ್ಯಸಭೆಯಲ್ಲಿ ತೀವ್ರ ಕಳವಳ, ಆಕ್ರೋಶ ವ್ಯಕ್ತಗೊಂಡಿತ್ತು.
ಇದನ್ನು ಅನುಸರಿಸಿ ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರಿಗೆ ಸೂಚಿಸಿದ್ದರು.
ಈ ಪರಿಣಾಮವಾಗಿ ಇಸ್ರೇಲ್ ಲಿಕ್ಕರ್ ಕಂಪೆನಿಯ ಬ್ರಾಂಡ್ ಮ್ಯಾನೇಜರ್ ಗಿಲ್ಯಾಡ್ ಡ್ರಾರ್ ಅವರು ಕ್ಷಮೆಯಾಚನೆಯ ಹೇಳಿಕೆಯೊಂದನ್ನು ಹೊರಡಿಸಿ ಗಾಂಧಿಯ ಚಿತ್ರವನ್ನು ಲಿಕ್ಕರ್ ಬಾಟಲ್‍ನಲ್ಲಿ ಹಾಕಿರುವ ಕಾರಣ ಭಾರತ ಸರಕಾರ ಮತ್ತು ಸಮಸ್ತ ಭಾರತೀಯರ ಮನಸ್ಸಿಗೆ ನೋವಾಗಿರುವುದಕ್ಕೆ ಮಾಲ್ಕಾ ಬಿಯರ್ ಕ್ಷಮೆಯಾಚಿಸುತ್ತದೆ ಎಂದು ಹೇಳಿದ್ದಾರೆ.