ಮೂಡಬಿದ್ರೆಯ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ – ಕಹಳೆ ನ್ಯೂಸ್
ಮೂಡಬಿದ್ರೆ: ಕೇವಲ ರಾಜಕಾರಣಿಗಳು ಮಾತ್ರ ನಾಯಕರಲ್ಲ, ಈ ದೇಶವನ್ನು ಮುನ್ನಡೆಸುವ ಚಿಂತನೆಯನ್ನು ಹೊಂದಿರುವ ಪ್ರತಿಯೋರ್ವ ನಾಗರಿಕ ಕೂಡ ಈ ದೇಶದ ನಾಯಕ. ರಾಜಕೀಯ ಅನ್ನುವಂತಹದ್ದು ದೇಶಕ್ಕೆ ಹಿನ್ನೆಡೆಯಾದರೆ ರಾಜಕಾರಣ ಅನ್ನುವಂತಹದ್ದು ದೇಶದ ಅಭಿವೃದ್ದಿಗೆ ಪೂರಕ. ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ನಡೆದರೆ ದೇಶದ ಪ್ರಗತಿಗೆ ಕಾರಣರಾಗುತ್ತಾರೆ ಎಂದು ಮಂಗಳೂರಿನ ಉಪತಹಶೀಲ್ದಾರ್ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.
ಮೂಡಬಿದ್ರೆಯ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಸಂಸ್ಥೆಯ 2019-20ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವೇ ಒಪ್ಪಿದ ಜಗತ್ ವಂದ್ಯ ದೇಶ ನಮ್ಮ ಭಾರತ. ನರೇಂದ್ರ ಮೋದಿ, ಗಾಂಧೀಜಿಯವರಂತಹ ಅನಘ್ರ್ಯ ರತ್ನಗಳು ಎಂದೆನಿಸಿಕೊಂಡಿದ್ದು ರಾಜಕೀಯದಿಂದಲ್ಲ, ಅವರ ವ್ಯಕ್ತಿತ್ವವು ಅವರನ್ನು ಉತ್ತಮ ನಾಯಕರನ್ನಾಗಿ ಮಾಡಿದೆ. ಅಂತಹ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಹೊಂದಿದಾಗ ಉತ್ತಮ ನಾಯಕತ್ವವನ್ನು ಹೊಂದಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಹವ್ಯಾಸಗಳು ಬದಲಾದಾಗ ಭವಿಷ್ಯ ಬದಲಾಗುತ್ತದೆ. ಅವಕಾಶಗಳು, ಜವಾಬ್ದಾರಿಗಳು ಬಂದಾಗ ಎರಡೂ ಕೈಯಿಂದ ಹಿಡಿದಿಟ್ಟುಕೊಳ್ಳಿ, ಕಷ್ಟವನ್ನು ಎದುರಿಸಲು ಸಿದ್ಧರಾಗಿ, ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ, ಸುಂದರ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ ವಿದ್ಯಾರ್ಥಿ ಸಂಸತ್, ಕೇವಲ ಹೆಸರಿಗೆ ಸೀಮಿತವಾಗಿರದೆ ಕಾರ್ಯಬದ್ಧವಾಗಿರಬೇಕು. ಆಗ ಮಾತ್ರ ಶಾಲಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಶಿಕ್ಷಕಿ ಜಯಶೀಲ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಗಣಿತ, ವಿಜ್ಞಾನ ಸಂಘಗಳನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿ ಭಕ್ತಿ ನಿರೂಪಿಸಿ, ವಿದ್ಯಾರ್ಥಿ ನಾಯಕ ತರುಣ್ ಜಿ ಎಸ್, ವಿದ್ಯಾರ್ಥಿ ಉಪನಾಯಕ ರಾಘವ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.