ಕರ್ನಾಟಕ : ರಾಜ್ಯಾದ್ಯಂತ ಚುನಾವಣಾ ಕಾವು ನಿಧಾನವಾಗಿ ಏರುತ್ತಿದ್ದು ಇದರ ಜೊತೆ ಪಕ್ಷಾಂತರ ಸಹ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ಪಕ್ಷದ ಜೊತೆ ಅಧಿಕೃತವಾಗಿ ಗುರುತಿಸಿಕೊಳ್ಳದಿದ್ದರೂ BJP ಜೊತೆ ಭಾಗಶಃ ಸಂಭಂಧ ಹೊಂದಿದ್ದ ಖ್ಯಾತ ಭಾಷಣಕಾರರು ಪ್ರಬಲ ಹಿಂದುತ್ವವಾದಿ ಹಾಗೂ ಇತ್ತಿಚಿನ ದಿನಗಳಲ್ಲಿ ಜಾತ್ಯಾತೀತವಾದದ ಕಡೆ ಒಲವು ತೋರುತ್ತಿರುವ ಚಕ್ರವರ್ತಿ ಸೂಲಿಬೆಲೆಯವರು ಜೆಡಿ(ಎಸ್) ಸೇರುವುದು ಬಹುತೇಖ ಖಚಿತ ಎಂದು ಹೇಳಲಾಗಿದೆ. ಮೊದಲು ಉಪೇಂದ್ರರವರ ಜೊತೆ ಕಾಣಿಸಿಕೊಂಡು ಈಗ ಮತ್ತೆ ತಮ್ಮ ಅದೇ ಹಳೇ ಚಾಳಿಮುಂದುವರಿಸಿದ್ದಾರೆ.
ಮೂಲತಃ ಗೌಡ ಸಾರಸ್ವತ ಬ್ರಾಹ್ಮಣ (GSB) ಜಾತಿಗೆ ಸೇರಿರುವ ಚಕ್ರವರ್ತಿಯವರು ಜೆಡಿ(ಎಸ್)ಗೆ ಸೇರಿದರೆ ಆ ಪಕ್ಷಕ್ಕೆ ಒಂದು ಮಟ್ಟಿನ ಲಾಭ ಆಗಬಹುದು ಎಂದು ಲೆಕ್ಕಿಸಲಾಗಿದೆ. ಜೆಡಿ(ಎಸ್) ನೆಲೆಯಿಲ್ಲದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಂಪೂರ್ಣ ಜವಾಬ್ದಾರಿಯನ್ನು ಮುಖಂಡರು ಚಕ್ರವರ್ತಿಯವರಿಗೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಚಕ್ರವರ್ತಿಯವರ ಆಪ್ತ ಹಾಗೂ ವಿನಾಯಕ ಬಾಳಿಗಾ ಕೊಲೆಯಲ್ಲಿ ಕೇಳಿ ಬಂದಿದ್ದ ನರೇಶ್ ಶೆಣೈ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು, ಇವರು ಸಹ GSB ಸಮುದಾಯಕ್ಕೆ ಸೇರಿರುವ ಕಾರಣ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಈ ಹಿಂದೆ ಈ ಕ್ಷೇತ್ರವನ್ನು GSB ಸಮುದಾಯಕ್ಕೆ ಸೇರಿದ್ದ ಯೋಗಿಶ್ ಭಟ್ BJP ಯಿಂದ ಆಯ್ಕೆಯಾಗಿದ್ದರು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ. ಅದೇ ರೀತಿ ಉಡುಪಿಯಿಂದ ಚಕ್ರವರ್ತಿ ಸೂಲಿಬೆಲೆಯವರು ಕಣಕ್ಕಿಳಿಯಬಹುದು. ಇವರಿಗೆ ಉಡುಪಿ ಅಷ್ಠ ಮಠಗಳ ಬೆಂಬಲ ಪರೋಕ್ಷವಾಗಿ ದೊರೆಯಬಹುದು ಹಾಗೂ ಬಾಹುಳ್ಯದಲ್ಲಿರುವ GSB ಮತಗಳು ಮತ್ತು ಜೆಡಿ(ಎಸ್)ನ ಸಾಂಪ್ರದಾಯಕ ಮತಗಳು ದೊರೆತರೆ ಗೆಲುವು ಕಷ್ಟ ಸಾಧ್ಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟ, ಅದಕ್ಕೂ ಹಿಂದೆ ನಡೆದ ಉಡುಪಿ ಚಲೋ ಮುಂತಾದ ಸನ್ನಿವೇಶಗಳಲ್ಲಿ ಚಕ್ರವರ್ತಿಯವರು ಶ್ರೀ ಮಠವನ್ನು ಸಮರ್ಥಿಸಿಕೊಂಡ ಕಾರಣ ಉಡುಪಿ ಜನರು ಇವರ ಮೇಲೆ ಒಂದು ರೀತಿಯ ಆಶಾಭಾವ ಹೊಂದಿರಬಹುದು ಎಂಬ ಲೆಕ್ಕಾಚಾರವನ್ನು ಜೆಡಿ(ಎಸ್)ನ ಚಿಂತಕರ ಚಾವಡಿ ಲೆಕ್ಕ ಹಾಕಿದೆ. ಇವರ ಜೊತೆಗೆ ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು. ಈ ಮೂಲಕ ಜೆಡಿ(ಎಸ್) ಅಸ್ತಿತ್ವದಲ್ಲಿ ಇಲ್ಲದ ಉಡುಪಿ-ಚಿಕ್ಕಮಗಳೂರು-ದಕ್ಷಿಣ ಕನ್ನಡ ದಲ್ಲಿ ಈ ಬಾರಿ ಖಂಡಿತ ಫಸಲು ಪಡೆಯಬಹುದೆಂಬ ಲೆಕ್ಕಾಚಾರದಲ್ಲಿ ಜೆಡಿ(ಎಸ್) ನ ಮುಖಂಡರು ತೊಡಗಿದ್ದಾರೆ.
ಅದಾಗಲೇ ಕಾಂಗ್ರೇಸ್ ಮೃದು ಹಿಂದುತ್ವದ ಹಾದಿಗೆ ಹೊರಳುತ್ತಿರುವುದರಿಂದ ಅತಿಯಾದ ಅಲ್ಪ ಸಂಖ್ಯಾತರ ಓಲೈಕೆ ಪಕ್ಷಕ್ಕೆ ಪೂರಕವಲ್ಲ ಎಂಬ ಸಂದೇಶ ಜೆಡಿ(ಎಸ್) ಹೈಕಮಾಂಡ್ ಗೆ ತಲುಪಿದೆ. ಹಾಗಾಗಿ ಹಿಂದುತ್ವದಿಂದ ಹೆಸರು ಮಾಡಿರುವ ಚಕ್ರವರ್ತಿಯವರನ್ನು ಪಕ್ಷಕ್ಕೆ ತೆಗೆದುಕೊಂಡು ಈ ಮೂಲಕ ಹಿಂದುತ್ವವಾದಿಯ ಮೂಲಕ ಒಂದಷ್ಟು ಮತಗಳನ್ನು ಸೆಳೆದುಕೊಂಡರೆ ಕರಾವಳಿ ಹಾಗೂ ಮಲೆನಾಡಿನಲ್ಲಿ ತೆನೆ ಹೊತ್ತ ಮಹಿಳೆ ಅರಳಬಹುದು ಎಂಬ ಗಂಭೀರ ಚಿಂತನೆ ನಡೆಸಿದ್ದಾರೆ.
ಸದಾ ಕಾಲ ಭಾರತ-ಚೀನಾ , ರಾಷ್ಟ್ರೀಯತೆ , ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಚಕ್ರವರ್ತಿ ಧೀಡಿರಂತ ಪ್ರಾದೇಶಿಕತೆ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ನನ್ನ ಕನಸಿನ ಕರ್ನಾಟಕ ಎಂಬ ಅಭಿಯಾನ ರೂಪಿಸಿದರು ಅವರಿಗೆ ಮೊದಲು ಸಿಗುತ್ತಿದ್ದ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ಇದು ಅವರು ಜೆಡಿ(ಎಸ್)ನ ಕದ ತಟ್ಟುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೂ ಚಕ್ರವರ್ತಿಯವರು ಅದೆಲ್ಲವನ್ನೂ ಅಲ್ಲಗಳೆದು ಸ್ಪಷ್ಟಿಕರಣ ಕೊಟ್ಟಿದ್ದರು. ಆದರೇ ಅವರು ಮೊನ್ನೆ ಬರೆದ ಐದಾರೂ ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ ಎಂಬ ಲೇಖನ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯವರ ವಿರುದ್ಧ ಎಂಬ ಮಾತುಗಳು ಕೇಳಿ ಬಂದವು. ಈ ಕಾರಣಕ್ಕೆ ಅನಂತ್ ಕುಮಾರ್ ಹೆಗಡೆಯವರ ಅಭಿಮಾನಿಗಳು ಮತ್ತು ಸೂಲಿಬೆಲೆಯವರ ಬೆಂಬಲಿಗರ ನಡುವೆ ವಾಗ್ಯುದ್ದಗಳು ನಡೆದವು. ಇವೆಲ್ಲವನ್ನು ಗಮನಿಸಿದರೆ ಬಿ.ಜೆ.ಪಿ ಯಲ್ಲಿ ದಿನೇ ದಿನೇ ಭವಿಷ್ಯ ಮಂಕಾಗುತ್ತಿರುವ ಕಾರಣ ಸೂಲಿಬೆಲೆಯವರು ಮಹೇಂದ್ರ ಕುಮಾರ್ ರವರ ಹಾದಿಯಲ್ಲಿಯೇ ಸಾಗಬಹುದೆಂಬ ಅನುಮಾನ ದಟ್ಟವಾಗಿದೆ.
ಚಕ್ರವರ್ತಿಯವರ ಭಾಷಣಕ್ಕೆ ಅಭಿಮಾನಿಗಳಾಗಿರುವವರು ಅವರು ಜೆಡಿ(ಎಸ್)ಗೆ ಮತ ಹಾಕಿ ಅಂದರೇ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದೇ ಈಗ ಎಲ್ಲರ ಮುಂದಿನ ಯಕ್ಷ ಪ್ರಶ್ನೆಯಾಗಿದೆ. ಹಿಂದುತ್ವ ಒಪ್ಪುವರು ಜೆಡಿ(ಎಸ್) ನ ಓಲೈಕೆ ರಾಜಕಾರಣಕ್ಕೆ ಕಟ್ಟರ್ ವಿರೋಧಿಗಳು. ಇದನ್ನು ಚಕ್ರವರ್ತಿಯವರು ಹೇಗೆ ನಿಭಾಯಿಸುತ್ತಾರೆಂಬುದಕ್ಕೆ ಕಾಲವೇ ಉತ್ತರ ಹೇಳಬೇಕಾಗಿದೆ. ಒಟ್ಟಿನಲ್ಲಿ ಗುಜರಾತ್ ನಲ್ಲಿ ಹಾರ್ದಿಕ್, ಜಿಗ್ನೇಶ್, ಅಲ್ಪೇಶ್ ಮೂಲಕ ಬಿ.ಜೆ.ಪಿಯನ್ನು ಕಾಂಗ್ರೇಸ್ ಕಟ್ಟಿ ಹಾಕಿತ್ತು. ಕರ್ನಾಟಕದಲ್ಲಿ ಸೂಲಿಬೆಲೆ-ಶೆಣೈ-ಮಹೇಂದ್ರ ಕುಮಾರ್ ಮೂಲಕ ಬಿ.ಜೆ.ಪಿಯನ್ನು ಕಟ್ಟಿಹಾಕಿ ಕಾಂಗ್ರೇಸ್ ಜೊತೆ ಸಮ್ಮಿಶ್ರ ಸರ್ಕಾರ ನಡೆಸಬಹುದೆಂಬ ಕನಸನ್ನು ಜೆಡಿ(ಎಸ್) ಕಾಣುತ್ತಿದೆ. ಆದರೇ ಈ ಪ್ರಯತ್ನದಲ್ಲಿ ಅದು ಎಷ್ಪರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕೆಲವೇ ತಿಂಗಳಲ್ಲಿ ಜಗಜ್ಜಾಹೀರಾಗಲಿದೆ..