ನವದೆಹಲಿ: ಭರ್ಜರಿ ಗೆಲುವಿನೊಂದಿಗೆ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಾರ್ಟಿ ಮೊದಲ ಬಜೆಟ್‍ನ್ನು ನೂತನ ಹಣಕಾಸಿನ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್‍ಡಿಎ ಸರ್ಕಾರದ ಬಜೆಟ್‍ನ್ನು ಓರ್ವ ಮಹಿಳೆ ಮಂಡಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಇಂದು ಬಜೆಟ್ ಮಂಡನೆಯಾಗಲಿದ್ದು ನಿನ್ನೆ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಮಣಿಯನ್ ಅವರು ಸಂಸತ್‍ಗೆ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ್ದರು. ಅದರ ಅನ್ವಯ ಭಾರತವು ಶೇ 7ರ ಜಿಡಿಪಿ ಪ್ರಗತಿಯನ್ನು ನಿರೀಕ್ಷಿಸಿದೆ. ಅದನ್ನು ಸಾಧಿಸಲು ಈ ಬಾರಿಯ ಬಜೆಟ್‍ನಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಜಿಡಿಪಿ ಪ್ರಗತಿ, 2025ಕ್ಕೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳು, ತೆರಿಗೆ ಸಂಗ್ರಹದಲ್ಲಿನ ಬದಲಾವಣೆಗಳು, ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈಲ್ವೆ ಯೋಜನೆಗಳು, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಆರೋಗ್ಯ, ಮೂಲಭೂತ ಸೌಕರ್ಯದ ವೃದ್ಧಿ ಸೇರಿದಂತೆ ಇತರೆ ಅನೇಕ ಅಂಶಗಳು ಸೇರಿಕೊಂಡಿವೆ.
ಅಲ್ಲದೆ, ದೇಶದ ಅನೇಕ ಕಡೆ ಬರ ಪರಿಸ್ಥಿತಿ ಉಂಟಾಗಿದ್ದು, ನೀರಿನ ಕೊರತೆ ನೀಗಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಕೆರಳಿಸಿದೆ. ಅಗತ್ಯ ವಸ್ತುಗಳು, ಐಷಾರಾಮಿ ಸರಕುಗಳ ಬೆಲೆ ಏರಿಕೆ ಮತ್ತು ಇಳಿಕೆ, ತೆರಿಗೆ, ಅದಾಯ ತೆರಿಗೆಯಲ್ಲಿ ಬದಲಾವಣೆಗಳ ಬಗ್ಗೆಯೂ ಹಲವು ನಿರೀಕ್ಷೆಗಳೂ ಇವೆ.