ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆ 2.7 ಟ್ರಿಲಿಯನ್ ಡಾಲರ್ ತಲುಪಿದೆ; ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್
ನವದೆಹಲಿ: ಭಾರತದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪಲು 55 ವರ್ಷ ಬೇಕಾಯಿತು. ಆದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇವಲ 5 ವರ್ಷದಲ್ಲಿ ನಾವು 1 ಟ್ರಿಲಿಯನ್ ಡಾಲರ್ ಸೇರಿಸಿದ್ದೇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಭಾರತದ ಪೂರ್ಣಪ್ರಮಾಣದ ಪ್ರಥಮ ಮಹಿಳಾ ವಿತ್ತ ಸಚಿವೆಯಾಗಿ ಆಯವ್ಯಯ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಭಾರತದ ಆರ್ಥಿಕತೆ ಯಾವ ರೀತಿ ವೇಗವಾಗಿ ಬೆಳೆಯುತ್ತಿದೆ ಎಂದು ಬಜೆಟ್ ಮಂಡನೆಯಲ್ಲಿ ವಿವರಿಸಿದರು. ಆದರೆ, ಇದೆಲ್ಲಾ ಸಾಧ್ಯವಾಗಿದ್ದು, ಜನರು ನರೇಂದ್ರ ಮೋದಿ ಸರಕಾರದ ಮೇಲೆ ಇಟ್ಟಿರುವ ಭರವಸೆಯಿಂದಾಗಿ. ಜನರ ಹೃದಯ ನಿರೀಕ್ಷೆ, ನಂಬಿಕೆ ಮತ್ತು ಆಶಾಭಾವನೆಯಿಂದ ತುಂಬಿದ್ದರಿಂದ ಕೇವಲ 5 ವರ್ಷದಲ್ಲಿ ಭಾರತದ ಆರ್ಥಿಕತೆಯನ್ನು ದುಪ್ಪಟ್ಟು ಮಾಡಲು ಸಾಧ್ಯವಾಯಿತು ಎಂದು ಅವರು ಹೆಮ್ಮೆಯಿಂದ ಹೇಳಿದರು.
5 ವರ್ಷಗಳ ಹಿಂದೆ ಭಾರತದ ಆರ್ಥಿಕ ಸ್ಥಿತಿ ಜಾಗತಿಕವಾಗಿ 11ನೇ ಸ್ಥಾನದಲ್ಲಿತ್ತು. ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗುತ್ತಿರುವುದರಿಂದ ಇದೀಗ ಅದು 6ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ ವರ್ಷದಲ್ಲಿಯೇ ಭಾರತದ ಆರ್ಥಿಕ ಸ್ಥಿತಿ 3 ಟ್ರಿಲಿಯನ್ ಡಾಲರ್ ಗೆ ತಲುಪಲಿದೆ. ಅಲ್ಲದೆ, ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ತಲುಪುವ ಗುರಿ ಹೊಂದಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ವಿವರಿಸಿದರು.
2014ರಲ್ಲಿ ನರೇಂದ್ರ ಮೋದಿ ಸರಕಾರ ಸ್ಥಾಪಿಸಿದಾಗ ಭಾರತದ ಆರ್ಥಿಕತೆ 1.85 ಟ್ರಿಲಿಯನ್ ಡಾಲರ್ ನಷ್ಟಿತ್ತು. ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆ 2.7 ಟ್ರಿಲಿಯನ್ ಡಾಲರ್ ತಲುಪಿದೆ. ಮತ್ತು 2024ರೊಳಗೆ ಆರ್ಥಿಕ ಸ್ಥಿತಿಯನ್ನು 5 ಟ್ರಿಲಿಯನ್ ಡಾಲರ್ ತಲುಪುವ ಗುರಿ ಹೊಂದಿದ್ದೇವೆ ಎಂದು ಅವರು ಹೇಳಿದರು. ಎರಡನೇ ಬಾರಿ ಆಡಳಿತ ಹಿಡಿದಿರುವ ನರೇಂದ್ರ ಮೋದಿ ಅವರು, ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲ ರಾಜ್ಯಗಳಿಗೆ ಕರೆ ನೀಡಿದ್ದಾರೆ. 2024ರೊಳಗೆ ಭಾರತದ ಆರ್ಥಿಕ ಸ್ಥಿತಿ 5 ಟ್ರಿಲಿಯನ್ ಡಾಲರ್‍ಗೆ ತಲುಪುವಂತಾಗಲು ಎಲ್ಲ ರಾಜ್ಯಗಳ ಸಹಕಾರ ಕೋರಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಯ ಸಂದರ್ಭದಲ್ಲಿ ತಿಳಿಸಿದರು