Wednesday, January 22, 2025
ಸುದ್ದಿ

ಕತ್ತಲು ತುಂಬಿದ ಸುಬ್ರಹ್ಮಣ್ಯಕ್ಕೆ ಬೆಳಕು ನೀಡುವವರಾರು – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಆದಾಯದಲ್ಲಿ ರಾಜ್ಯದಲ್ಲಿ ಶ್ರೀಮಂತ ದೇವಸ್ಥಾನವೆಂಬ ಹೆಸರು ಪಡೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಹಲವು ಸಮಯಗಳಿಂದ ಕತ್ತಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ದಿನಗಳು ಮತ್ತು ಸಮಯದಲ್ಲಿ ನಗರಕ್ಕೆ ಕರೆಂಟು ಸರಬರಾಜು ಇರುವುದಿಲ್ಲ. ವಾರದಲ್ಲಿ ಎರಡು ದಿನ, ಮಾರ್ಗದ ದುರಸ್ತಿಗೆಂದು ವಿದ್ಯುತ್ ಸರಬರಾಜು ಸ್ತಗಿತಗೊಳಿಸಿದರೆ, ಇತರೆ ದಿನಗಳಲ್ಲಿ ಲೈನ್ ದೋಷದ ಕಾರಣ ನೀಡಿ ವಿದ್ಯುತ್ ತಡೆಹಿಡಿಯಲಾಗುತ್ತಿದೆ. ಹೀಗೆ ಬಹುತೇಕ ದಿನಗಳಿಂದ ಇದೇ ಸಮಸ್ಯೆ ಪುನಾರವರ್ತನೆ ಆಗುತ್ತಿದೆ.

ಸರಬರಾಜು ಸ್ತಗಿತಗೊಳಿಸುವಾಗ ಸಮಯದ ಮೇಲೆ ತೋರುವ ಆಸಕ್ತಿ, ಸಂಜೆ ಮರು ಸಂಪರ್ಕ ಜೋಡಣೆ ವೇಳೆ ಮೆಸ್ಕಾಂ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಬೆಳಗ್ಗೆ 10 ಗಂಟೆಗೆ ಸರಿಯಾದ ಸಮಯಕ್ಕೆ ಕಡಿತಗೊಳಿಸಿ, ಸಂಜೆ 6 ಗಂಟೆ ಅಂತ ಹೇಳಿ ರಾತ್ರಿ 7 ಅಥವಾ 8.30 ಕೆಲವೊಮ್ಮೆ ರಾತ್ರಿ 10ರ ತನಕವೂ ನೀಡಲಾಗುತ್ತಿಲ್ಲ. ಸಂಜೆ 4 ಗಂಟೆ ತನಕ ಲೈನ್ ಕೆಲಸ ಮಾಡಿ ಉಳಿದ ಎರಡು ಗಂಟೆ ಒಳ ಮಾರ್ಗದ ದೋಷಗಳನ್ನು ಖಚಿತ ಪಡಿಸಿಕೊಂಡು ಸಂಜೆ 6 ಗಂಟೆಗೆ ಕರೆಂಟ್ ನೀಡಲು ಮೆಸ್ಕಾಂ ಕ್ರಮವಹಿಸಲು ಅವಕಾಶವಿದ್ದು, ಈ ಕುರಿತು ಮೆಸ್ಕಾಂಗೆ ಸಾರ್ವಜನಿಕರು ಮನವರಿಕೆ ಮಾಡಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರೆಂಟ್ ಇಲ್ಲ ಎಂದು ದಿನವಿಡಿ ಮೊಬೈಲ್ ಸಿಗ್ನಲ್ ಇರಲ್ಲ. ಡೀಸೆಲ್‍ಗೆ ದುಡ್ಡಿಲ್ಲ. ಈ ಎರಡು ಸಮಸ್ಯೆಗಳಿಂದ ಕ್ಷೇತ್ರದ ಮಂದಿ ಹೈರಾಣಾಗಿದ್ದಾರೆ. ಇವುಗಳ ವ್ಯತ್ಯಾಯದಿಂದ ಬ್ಯಾಂಕು, ಕಚೇರಿ ಎಲ್ಲಾ ಚಟುವಟಿಕೆಗಳು ಸ್ತಗಿತವಾಗುತ್ತದೆ. ಭಕ್ತರ ಪಾಡು ಕೇಳುವವರೇ ಇಲ್ಲ. ವಿದ್ಯುತ್, ಮೊಬೈಲ್ ವ್ಯತ್ಯಾಯದಿಂದ ಆಗುವ ಕಷ್ಟ ನಷ್ಟಗಳಿಗೆ ಮಿತಿಯಿಲ್ಲ. ಇದಕ್ಕೆ ಹೊಣೆಗಾರರು ಯಾರು ಇಲ್ಲ. ಮೆಸ್ಕಾಂ ಹಾಗೂ ಬಿಎಸ್‍ಎನ್‍ಎಲ್ ಎರಡಕ್ಕೂ ಬಿಲ್ ಹಣ ಪಾವತಿ ಮಾತ್ರ ಸರಿಯಾದ ಸಮಯಕ್ಕೆ ಆಗಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಡಳಿತ ಪಕ್ಷ, ವಿಪಕ್ಷ ಹೀಗೆ ಸಾಮಾಜಿಕ ಸಂಘಟನೆಗಳು, ವರ್ತಕರು, ಅಧಿಕಾರಿಗಳು ಜನಪ್ರತಿನಿಧಿಗಳು ಎಲ್ಲರು ಮೌನದಲ್ಲಿ ಮುಳುಗಿದ್ದರೆ, ಕ್ಷೇತ್ರದ ಸಂಕಷ್ಟ ಕೇಳುವವರು ಯಾರು ಇಲ್ಲ. ಕುಕ್ಕೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರೇ ಇಲ್ಲವಾದಲ್ಲಿ ಮುಂದಿನ ಸ್ಥಿತಿ ಎಲ್ಲಿಗೆ ತಲುಪಬಹುದು.

ಕತ್ತಲಲ್ಲಿ ಮುಳುಗಿರುವ ಕುಕ್ಕೆಯಲ್ಲಿ ರಾತ್ರಿ ಸರಿಯಾದ ದೀಪದ ಬೆಳಕು ಇಲ್ಲ. ಕುಮಾರಧಾರದಿಂದ ಪೇಟೆ ತನಕದ ಕಂಬಗಳ ಲೈಟ್ ಉರಿಯುವುದಿಲ್ಲ. ಕರೆಂಟ್ ಇಲ್ಲದೆ ಕಗ್ಗತ್ತಲ ಕತ್ತಲ್ಲಲ್ಲಿ ಜನ ಪರದಾಡುವಚಿತಾಗಿದೆ. ದೇವಸ್ಥಾನ, ಮಠಗಳಿಗೆ ಬರುವ ಲಕ್ಷ ಮಂದಿ ಭಕ್ತರು ಇಲ್ಲಿಯ ಅವ್ಯವಸ್ಥೆ ಹಾಗೂ ಕೊರತೆಗಳನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರು ಸ್ಥಳೀಯ ಆಡಳಿತ ಮಂಡಳಿಗಳು ಹಾಗೂ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಗಳ ಕಿವಿ ಹಿಂಡುವ ಕೆಲಸಕ್ಕೆ ಮುಂದಾಗಬೇಕಾಗಿದೆ.

ನಗರದ ವರ್ತಕರು, ಸಂಘ ಸಂಸ್ಥೆಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಆಲಸ್ಯ ಬಿಟ್ಟು ಮೈ ಕೊಡವಿ ಎದ್ದೇಳಬೇಕು. ಇವೆಲ್ಲವು ಸಾಮೂಹಿಕ ಸಮಸ್ಯೆ ಹೀಗಾಗಿ ಸಮಸ್ಯೆ ಬಗೆಹರಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದು ಕ್ಷೇತ್ರದ ಸ್ಥಳೀಯರ ಕೋರಿಕೆ.