ಈ ಬಾರಿ ಕೇಂದ್ರ ಬಜೆಟ್‍ನಲ್ಲಿ ಪ್ರಸ್ತಾಪವಾದಂತೆ ಸರ್ ಚಾರ್ಜ್ ಜಾರಿಯಾದ ಮೇಲೆ, ಅತ್ಯಂತ ಶ್ರೀಮಂತ ವ್ಯಕ್ತಿಗಳ ಆದಾಯದಲ್ಲಿ ಕನಿಷ್ಠ 39% ತೆರಿಗೆ ಕಡಿತ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ, ಆದಾಯ ತೆರಿಗೆ ವ್ಯಾಪ್ತಿಯೊಳಗೆ ಬರುವಂತೆ 2 ಕೋಟಿಗಿಂತ ಹೆಚ್ಚಿನ ಆದಾಯ ಇದ್ದರೆ ಹೆಚ್ಚಿನ ಸರ್ ಚಾರ್ಜ್ ಪ್ರಸ್ತಾವ ಮಾಡಿದ್ದಾರೆ.
ಎರಡು ಕೋಟಿಯಿಂದ ಐದು ಕೋಟಿ ತನಕ ಹಾಗೂ ಐದು ಕೋಟಿಗಿಂತ ಹೆಚ್ಚು ಆದಾಯ ಇರುವವರಿಗೆ ಕ್ರಮವಾಗಿ 3% ಮತ್ತು 7% ಸರ್ ಚಾರ್ಜ್ ಏರಿಕೆ ಮಾಡಲಾಗಿದೆ. ಅತಿ ಹೆಚ್ಚು ಮೌಲ್ಯದ ಹೂಡಿಕೆದಾರರಿಗೆ ಇದು ದೊಡ್ದ ಹೊಡೆತ ನೀಡಲಿದೆ. ಈ ಏರಿಕೆ ಆದ ನಂತರ ದೊಡ್ಡ ಆದಾಯದವರ ತೆರಿಗೆ ದರವು 42%ವರೆಗೆ ತಲುಪುತ್ತದೆ.
2ರಿಂದ 5 ಕೋಟಿ ಮಧ್ಯೆ ಆದಾಯ ಇರುವವರಿಗೆ ತೆರಿಗೆ ಪ್ರಮಾಣವು 39% ಆಗುತ್ತದೆ. ಇನ್ನು ಆದಾಯವು 5 ಕೋಟಿ ಮೀರಿದರೆ ಸರ್ ಚಾರ್ಜ್ ಏರಿಕೆ ನಂತರ 42.74 % ತೆರಿಗೆ ಬೀಳುತ್ತದೆ. ಇನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ 2 ಕೋಟಿ ನಗದು ವಿಥ್ ಡ್ರಾ ಮಾಡಿದರೆ 2% ತೆರಿಗೆ ಬೀಳುತ್ತದೆ. ಇದರಿಂದ ಪಾರದರ್ಶಕತೆಗೆ ಅನುಕೂಲ ಆಗಲಿದ್ದು, ಡಿಜಿಟಲ್ ಪಾವತಿಗೆ ಪ್ರೋತ್ಸಾಹ ದೊರೆಯುತ್ತದೆ.