ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷ 2019-20 ರ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಜುಲೈ 6ರಂದು ನಡೆದ ನೇರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ನಿತಿನ್ ಎಚ್ ಆರ್, ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ಅಬ್ದುಲ್ ರಝಾಕ್ ‘ಸಿ’ ಹಾಗೂ ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ಸುಜ್ಞಾ ಎಸ್ ರೈ ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ನಿತಿನ್ ಎಚ್ ಆರ್ ಮತ್ತು ಅಂತಿಮ ಬಿಕಾಮ್ ‘ಬಿ’ ತರಗತಿಯ ಮಹಮ್ಮದ್ ಮನ್ಸೂರ್ ಇವರೊಳಗೆ ಸ್ಪರ್ಧೆ ಏರ್ಪಟ್ಟರೆ, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ಸುಜ್ಞಾ ಎಸ್ ರೈ ಮತ್ತು ಅಂತಿಮ ಬಿಎಸ್ಸಿಯ ಸೌಮ್ಯ ಪಿ ಇವರೊಳಗೆ ಸ್ಪರ್ಧೆ ನಡೆದಿತ್ತು. ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಕಾಮ್ ‘ಸಿ’ ತರಗತಿಯ ಅಬ್ದುಲ್ ರಝಾಕ್ ಅವಿರೋದವಾಗಿ ಆಯ್ಕೆಯಾದರು.
ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಚುನಾವಣಾ ಕಣದಲ್ಲಿದ್ದ ಎಲ್ಲಾ ಐದು ಅಭ್ಯರ್ಥಿಗಳು ವಿದ್ಯಾರ್ಥಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಆಯಾ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಬ್ಯಾಲೆಟ್ ಪೇಪರ್ ಮೂಲಕ ತಮ್ಮ ಮತಗಳನ್ನು ಚಲಾಯಿಸಿದರು. ಬಳಿಕ ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಮತ ಎಣಿಕೆಯನ್ನು ನಡೆಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಕಾಲೇಜು ಪ್ರಾಂಗಣದಲ್ಲಿ ಫಲಿತಾಂಶವನ್ನು ಘೋಷಿಸಿ, ಚುನಾಯಿತರಾದ ಪದಾಧಿಕಾರಿಗಳನ್ನು ಅಭಿನಂದಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಗಣಪತಿ ಎಸ್, ಡಾ. ಎ ಪಿ ರಾಧಾಕೃಷ್ಣ ಮತ್ತು ಎಡ್ವಿನ್ ಡಿ’ಸೋಜಾ ರಿಟರ್ನಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದರು. ಮತ ಎಣೆಕೆಯ ಮುಖ್ಯಾಧಿಕಾರಿಯಾಗಿ ಪ್ರೊ. ಮ್ಯಾಕ್ಸಿಂ ಕಾರ್ಲ್ ನಿರ್ವಹಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ| ಚಂದ್ರಶೇಖರ ಕೆ ಮತ್ತು ಭಾರತಿ ಎಸ್ ರೈ ಇವರ ಸಂಯೋಜನೆಯಲ್ಲಿ ಪ್ರಾಧ್ಯಾಪಕ ವೃಂದದವರು ವಿವಿಧ ರೀತಿಯ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿ, ಸಹಕರಿಸಿದರು.