ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕರ್ನಾಟಕದ ಕೀರ್ತಿಗೆ ಪದೇ ಪದೇ ಕಳಂಕ ತಂದು ಮತೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಪ್ಲಾನ್ ಮಾಡಿದ್ದು ಈ ಪಟ್ಟಿಯಲ್ಲಿ ಆರ್ ಎಸ್‍ಎಸ್ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸರ್ಕಾರದ ಈ ನಿಷೇಧಿತ ಪಟ್ಟಿಯಲ್ಲಿ ಹಿಂದೂಪರ ಸಂಘಟನೆಗಳಾದ ಆರ್ ಎಸ್‍ಎಸ್, ಬಜರಂಗದಳ, ಶ್ರೀರಾಮ ಸೇನೆ ಹಾಗೂ ಪಿಎಫ್‍ಐ, ಕೆಎಫ್‍ಡಿ, ಡಿಎಫ್‍ಐ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಿದೆ.
ಈಗಾಗಲೇ ಗೃಹ ಸಚಿವಾಲಯದ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆರ್ ಎಸ್‍ಎಸ್ ಪ್ರಚೋದನಕಾರಿ ಭಾಷಣದ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸಲಹೆ ಪಡೆದು ಆರ್‍ಎಸ್‍ಎಸ್ ನಿಷೇಧದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಿಎಂ ಬಯಸಿದ್ದಾರೆ ಎನ್ನಲಾಗಿದೆ.
ಕಠಿಣ ಕ್ರಮ: ಈ ವಿಚಾರದ ಬಗ್ಗೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೋಮುಭಾವನೆ ಕೆರಳಿಸುವಂತಹ ಎಲ್ಲಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆ ಸಂಘಟನೆ ಯಾವುದೇ ಧರ್ಮಕ್ಕೆ ಸೇರಿರಲಿ. ಆ ಸಂಘಟನೆಗಳು ಪಿಎಫ್‍ಐ, ಬಜರಂಗದಳ, ಶ್ರೀರಾಮಸೇನೆ ಯಾವುದೇ ಆಗಿರಬಹುದು ಎಲ್ಲದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಯಾರೂ ಸಾಯಬಾರದು. ಎಲ್ಲರ ಜೀವವೂ ಅಮೂಲ್ಯವಾದದ್ದು. ಸತ್ತವರ ಕುಟುಂಬದ ಬಗ್ಗೆ ನಮಗೆ ಅನುಕಂಪ ಇದೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಲಿದೆ. ಆದ್ರೆ ಈ ಬಿಜೆಪಿಯವ್ರು ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಾರೆ. ಅವರಿಗೆ ಗಲಾಟೆ ಮಾಡಲು ಹೇಳಿದ್ದು ಯಾರು? ಅವರೇನು ಹಿಂದುತ್ವವನ್ನ ಗುತ್ತಿಗೆ ಪಡೆದಿದ್ದಾರಾ? ನಾವೆಲ್ಲಾ ಹಿಂದುಗಳಲ್ವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕೂಲಂಕುಶವಾಗಿ ಪರಿಶೀಲಿಸಿ ಅವುಗಳನ್ನ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು.
ಪಿಎಫ್‍ಐ ಮೇಲೆ ಮಮತೆ ಯಾಕೆ: ಸುರತ್ಕಲ್ ದೀಪಕ್ ರಾವ್ ಕೊಲೆ ಪ್ರಕರಣದ ಪಿಎಫ್‍ಐ ಕೈವಾಡ ಇದೆ. ಶರತ್ ಮಡಿವಾಳ, ರುದ್ರೇಶ್ ಕೊಲೆ ಪ್ರಕರಣದ ಮಾದರಿಯಲ್ಲಿ ದೀಪಕ್ ಹತ್ಯೆ ನಡೆದಿದೆ. ಹೀಗಾಗಿ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಆರ್ ಎಸ್‍ಎಸ್ ಮುಖಂಡ ರಾಜೇಶ್ ಪದ್ಮಾರ್ ಆಗ್ರಹಿಸಿದ್ದಾರೆ.
ಎಲ್ಲಾ ಹತ್ಯೆಗಳಿಗೂ ಸಾಮ್ಯತೆ ಇವೆ. ಸಂಘ ಪರಿವಾರದ ಮೂಲಕ ಸಮಾಜ ಸೇವೆಗೆ ಮುಂದಾಗುವ ಯುವಕರಿಗೆ ಇದರಿಂದ ಹಿನ್ನೆಡೆ ಆಗುತ್ತಿರುವ ಹಿನ್ನೆಲೆಯಲ್ಲಿ ದೀಪಕ್ ಹತ್ಯೆ ಪ್ರಕರಣವನ್ನು ಎನ್‍ಐಎ ತನಿಖೆಗೆ ಒಪ್ಪಿಸಬೇಕು. ಈ ಎಲ್ಲ ಹತ್ಯಾ ಪ್ರಕರಣಗಳ ಹಿಂದೆ ಒಂದು ವಿಚಾರಧಾರೆ ಇರುವುದು ಗೊತ್ತಾಗುತ್ತಿದೆ. ಸರ್ಕಾರಕ್ಕೆ ಪಿಎಫ್‍ಐ ಮೇಲೆ ಇಷ್ಟೊಂದು ಮಮತೆ ಯಾಕೆ ಎಂದು ಅವರು ಪ್ರಶ್ನಿಸಿದರು.