ಬಂಟ್ವಾಳ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿನ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ 192 ಫಲಾನುಭವಿಗಳಿಗೆ 114.60 ಲಕ್ಷ ರೂ. ಸಹಾಯಧನ ಬಿಡುಗಡೆಯಾಗಿದೆ. ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಶ್ರಮಶಕ್ತಿ ಯೋಜನೆಯಲ್ಲಿ ಬಿಡುಗಡೆಯಾದ ಸಹಾಯ ಧನವನ್ನು 74 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಶ್ರಮಶಕ್ತಿ ಯೋಜನೆಯಲ್ಲಿ 74 ಮಂದಿ ಫಲಾನುಭವಿಗಳಿಗೆ 19.50 ಲಕ್ಷ ರೂ. ಸ್ವಯಂ ಉದ್ಯೋಗದಡಿ, 20 ಮಂದಿ ಫಲಾನುಭವಿಗಳಿಗೆ 24.50 ಲಕ್ಷ ರೂ, 66 ಮಂದಿ ಫಲಾನುಭವಿಗಳಿಗೆ 6.60 ಲಕ್ಷ ರೂ, ಕಿರುಸಾಲ ಹಾಗೂ ಗಂಗಾಕಲ್ಯಾಣದಡಿ 32 ಮಂದಿ ಫಲಾನುಭವಿಗಳಿಗೆ 64 ಲಕ್ಷ ರೂ ಮಂಜೂರಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಜನತೆಗಾಗಿ, ಯಾವುದೇ ಮಾಹಿತಿ ಬೇಕಿದ್ದಲ್ಲಿ ಶಾಸಕರ ಕಚೇರಿ ಸದಾ ತೆರೆದಿದ್ದು, ಸರಕಾರದ ಸವಲತ್ತು, ಯೋಜನೆಗಳ ಕುರಿತ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಾಲಾಕ್ಷಿ ಪೂಜಾರಿ ಉಪಸ್ಥಿತರಿದ್ದರು.