ಪುತ್ತೂರು: ದಿನಾಂಕ 05/07/2019 ಶುಕ್ರವಾರ ಸಂಜೆ 3ಘಂಟೆಗೆ ಪುತ್ತೂರಿನ ಹೃದಯಭಾಗದಲ್ಲಿರುವ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ಮಾದಕ ವ್ಯಸನಗಳು, ಮದ್ಯಪಾನ, ಧೂಮಪಾನ, ಮೊಬೈಲ್ ಫೋನಿನ ಅತಿಯಾದ ಬಳಕೆ ಮತ್ತು ಮಕ್ಕಳಲ್ಲಿ ಶಿಸ್ತು, ಕಾನೂನು ಪಾಲನೆಯ ಅರಿವು ಎಂಬಿತರ ವಿಷಯಗಳ ಬಗ್ಗೆ ಪುತ್ತೂರಿನ ಮಾನ್ಯ ಸಹಾಯಕ ಆಯುಕ್ತರ ಆದೇಶದಂತೆ ಸಂಸ್ಥೆಯ ಸಂಚಾಲಕ ಪಿ.ವಿ.ಗೋಕುಲ್‍ನಾಥ್ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಪುತ್ತೂರು ತಾಲೂಕು ಮಾನ್ಯ ಸಹಾಯಕ ಆಯುಕ್ತರು ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಪುತ್ತೂರು ಉಪವಿಭಾಗದ ವಿದ್ಯಾಸಂಸ್ಥೆಗಳ ಸಂಚಾಲಕರು ಹಾಗೂ ಮುಖ್ಯಗುರುಗಳಿಗೆ ಜು.5ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಸಭಾಭವನದಲ್ಲಿ ನಡೆದ “ಮಕ್ಕಳಲ್ಲಿ ಶಿಸ್ತು, ಕಾನೂನು ಪಾಲನೆಯ ಅರಿವು” ಕಾರ್ಯಗಾರದಲ್ಲಿ ಭಾಗವಹಿಸಿದ ಸಂಚಾಲಕರು, ಸದ್ರಿ ಕಾರ್ಯಾಗಾರದಲ್ಲಿ ಕಾನೂನಿನ ಸದ್ಭಳಕೆ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಲ್ಲೇಖಿಸಿದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಕಠಿಣ ಎಚ್ಚರಿಕೆಯನ್ನು ನೀಡಿದರು.
ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಂದ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ:
ಇತ್ತೀಚಿನ ಜಮಾನದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದು, ವಿವಿಧ ರೀತಿಯ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಮೊಬೈಲ್ ಫೋನ್. ಮೊಬೈಲ್ ಫೋನಿನ ಬಳಕೆ ಮಿತವಾಗಿರಬೇಕು. ಅವಶ್ಯಕತೆಗಾಗಿ ಮಾತ್ರ ಬಳಸಿಕೊಳ್ಳಬೇಕು. ಇನ್ನುಳಿದ ಸಮಯದಲ್ಲಿ ಸ್ವಿಚ್ ಆಫ್ ಮಾಡಿಟ್ಟುಕೊಳ್ಳಿ ಆಗ ಓದುವತ್ತಲೂ ನಿಮ್ಮ ಗಮನ ಸಾಗುತ್ತದೆ. ಮೊಬೈಲ್ ಫೋನಿನ ಅತಿಯಾದ ಬಳಕೆ ಆರೋಗ್ಯ ಸಮಸ್ಯೆಗಳಲ್ಲದೇ ಇತರ ಅಸಂಬದ್ಧ ಸಮಸ್ಯೆಗಳನ್ನು ಉಂಟುಮಾಡಿ, ಮುದ್ದಾಗಿ ಬೆಳೆಸಿದ ಮಕ್ಕಳು ಹೆತ್ತವರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ. ಇಲ್ಲಿ ಹೆತ್ತವರ ಪಾತ್ರವೂ ಬಹುಮುಖ್ಯವಾಗಿದೆ. ಮಕ್ಕಳ ಚಲನವಲನಗಳನ್ನು ಗಮನಿಸುವುದು ಅನಿವಾರ್ಯಾವಾಗಿದೆ. ಈ ನಿಟ್ಟಿನಲ್ಲಿ ಹೆತ್ತವರು ವಿದ್ಯಾಸಂಸ್ಥೆಗಳ ಜೊತೆ ಸಹಕರಿಸಬೇಕಾಗಿದೆ ಎಂದವರು ನುಡಿದರು.
ಅಂಗಡಿಗಳಲ್ಲಿ ಮೊಬೈಲ್ ಫೋನ್:
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಪೋನ್ ಜಾರಿಯಾದಂದಿನಿಂದ ವಿದ್ಯಾರ್ಥಿಗಳ ತಮ್ಮ ಮೊಬೈಲ್ ಫೋನ್‍ಗಳನ್ನು ಅಂಗಡಿಗಳಲ್ಲಿ ಇರಿಸುತ್ತಿರುವುದು ಸಾಮಾನ್ಯವಾಗಿದೆ. ಇದರ ಬಗ್ಗೆ ಮಾನ್ಯ ಸಹಾಯಕ ಆಯುಕ್ತರು ತೆಗೆದುಕೊಂಡ ಕಠಿಣ ನಿರ್ಧಾರದ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಲಾಯಿತು. ಯಾವುದೇ ವಿದ್ಯಾರ್ಥಿಯು ಅಂಗಡಿಗಳಲ್ಲಿ ತಮ್ಮ ಮೊಬೈಲ್ ಫೋನ್‍ಗಳನ್ನು ಇಟ್ಟುಕೊಂಡು ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡರೆ ನಮ್ಮ ಸಂಸ್ಥೆಯು ಜವಾಬ್ದಾರಿಯಲ್ಲ. ಅಲ್ಲದೇ ಪೋಲಿಸರಿಗೆ ಇಂತಹ ಸಂದರ್ಭಗಳಲ್ಲಿ ಸಂಸ್ಥೆಯು ಪೂರ್ಣವಾಗಿ ಸಹಕರಿಸುವುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಕಾನೂನಿಗೆ ವಿರೋಧವಾದ ಮತ್ತು ಸಮಾಜ ಮಾರಕ ಹಾಗೂ ಚಾರಿತ್ರ್ಯ ವಧೆಯಂತ ವಿಷಯಗಳನ್ನು ಮೊಬೈಲ್‍ಗಳಲ್ಲಿ ಸೃಷ್ಟಿಸಬಾರದು ಮತ್ತು ಶೇರ್ ಮಾಡಬಾರದೆಂದು ಎಚ್ಚರಿಸಿದರು.
ಮಾದಕ ದ್ರವ್ಯಗಳ ಬಳಕೆ:
ಪ್ರಸ್ತುತ ಬೆಳವಣಿಗೆಯ ಪ್ರಕಾರ ವಿದ್ಯಾರ್ಥಿಗಳು ಮಾದಕ ವ್ಯಸನ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆಗೆ ಒಳಗಾಗುತ್ತಿದ್ದು, ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಭವಿಷ್ಯದ ಬಗ್ಗೆ ಕನವರಿಸುತ್ತಿದ್ದ ಹೆತ್ತವರ ಕನಸು ಕಮರುತ್ತಿದೆ. ಇಂತಹ ದುಶ್ಚಟಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಮಾನಸಿಕ ರೋಗಿಗಳಾಗುವ ಸಾಧ್ಯತೆ ಹೆಚ್ಚಾಗಿ ಇದ್ದು, ಸ್ಥಿಮಿತ ಕಳೆದುಕೊಂಡು ಅಸಭ್ಯವಾದ ವರ್ತನೆಗೆ ತೊಡಗುವುದರಿಂದ, ಸೂಕ್ತ ಚಿಂತನೆಯನ್ನು ನಡೆಸಿಕೊಂಡು ಇಂತಹ ಅಭ್ಯಾಸಗಳನ್ನು ತ್ಯಜಿಸಬೇಕಾಗಿದೆ.
ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದೇವೆ. ಈ ಮಾದಕ ವಸ್ತುಗಳು ಇಂದಿನ ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿದೆ.
ವಿದ್ಯಾರ್ಥಿಗಳು ತಿಳಿದೋ ತಿಳಿಯದೆಯೋ ಇಂತಹ ಚಟಗಳ ಬಲೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರೆ ಶೀಘ್ರವಾಗಿ ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಪಡೆದುಕೊಂಡು ಭವಿಷ್ಯದ ಬೆಳಕನ್ನು ಬೆಳಗಿಸಿಕೊಳ್ಳಿ. ವಿದ್ಯಾರ್ಥಿಗಳೇ ದೇಶದ ಆಸ್ತಿ, ದೇಶದ ಭವಿಷ್ಯ ಧನಾತ್ಮಕ ಬದಲಾವಣೆ, ಸಮಾಜ ಪೂರಕ ಬೆಳವಣಿಗೆ ನಿಮ್ಮಿಂದ ಪ್ರಾರಂಭವಾಗಲಿ ಎಂದು ಸಂಚಾಲಕರು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗೆಗಿನ ಚಿಂತನೆಯನ್ನು ನಡೆಸಲು ಸೂಚಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸುವ ಸಲುವಾಗಿ ರಹಸ್ಯ ಕಾರ್ಯಾಚರಣೆಗಾಗಿ ಹೆತ್ತವರನ್ನೊಳಗೊಂಡ ಸಮಿತಿಯೊಂದನ್ನು ರಚಿಸುತ್ತಿದ್ದು, ಪ್ರತಿ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗಮನಿಸಲಾಗುತ್ತದೆ. ಹಾಗೂ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಸಂಶಯಾಸ್ಪದ ವಿದ್ಯಾರ್ಥಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಸಂಬಂಧ ಪಟ್ಟ ಹೆತ್ತವರು ಹಾಗೂ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ನುಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಕೆ.ಹೇಮಲತಾ ಗೋಕುಲ್‍ನಾಥ್ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.