ಅಲ್ಲಿ 250ಕ್ಕೂ ಅಧಿಕ ಸಸ್ಯ ತಳಿಗಳಿದ್ದವು 500ಕ್ಕೂ ಅಧಿಕ ವಿದ್ಯಾರ್ಥಿಗಳು ತಂಡ ತಂಡವಾಗಿ ಸೇರಿಕೊಂಡಿದ್ದರು. ಪ್ರತಿಯೊಬ್ಬರಲ್ಲೂ ಸಸಿಯೊಂದನ್ನು ದತ್ತು ಪಡೆದು ಅದನ್ನು ಪೋಷಿಸಬೇಕು ಎಂಬ ದೃಢ ನಿರ್ಧಾರವಿತ್ತು. ಈ ಒಂದು ವೈಶಿಷ್ಟಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಮೂಡಬಿದಿರೆ. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲು, ಮಂಗಳೂರು ಹಾಗೂ ಜೈನ್ ಮೆಲನ್ ಮೂಡಬಿದ್ರೆಯ ಸಹಯೋಗದೊಂದಿಗೆ “ಅವಸಾನದ ತಳಿಗಳಿಗೆ ಸಂರಕ್ಷಣೆ” ಎನ್ನುವಂತಹ ಧ್ಯೇಯ ವಾಕ್ಯದಡಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ತುಂತುರು ಮಳೆಯನ್ನೂ ಲೆಕ್ಕಿಸದೆ, ಹಾರೆ, ಪಿಕ್ಕಾಸು ಹಿಡಿದು ಗಿಡ ನೆಡುವ ಮೂಲಕ ಸಂಭ್ರಮಿಸಿದರು.
ಬಲು ಅಪರೂಪದ ತಳಿಗಳಾದ ಕದಂಬ, ಅಶೋಕ, ಬಸರಿಗಿಡ, ಸಿರಿಹೊನ್ನೆ ಮುಂತಾದ ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ನೆಡೆವುದರ ಮೂಲಕ ವಿಶಿಷ್ಟ ರೀತಿಯ ವನಮಹೋತ್ಸವ ಆಚರಣೆಗೆ ಸಂಸ್ಥೆಯು ಸಾಕ್ಷಿಯಾಯಿತು.
ಇದೇ ಸಂದರ್ಭದಲ್ಲಿ ಸಸ್ಯ ತಜ್ಞ ಲಯನ್ ಎಮ್. ದಿನೇಶ್ ನಾಯಕ್ ಇವರಿಂದ ಪಶ್ಚಿಮ ಘಟ್ಟದ ಸಸ್ಯ ತಳಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲಯನ್ ರವೀಂದ್ರನಾಥ್ ಶೆಟ್ಟಿ ಇವರು ಪರಿಸರ ಮಾಲಿನ್ಯ ಇಂದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು ಸಸ್ಯ ಸಂರಕ್ಷಣೆಯಿಂದ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್, ಮಂಗಳೂರು ಇದರ ಗವರ್ನರ್ ಲಯನ್ ಕೆ.ಸಿ.ಪ್ರಭು ಇವರು ಮಾತನಾಡಿ ಪರಿಸರದ ಬಗ್ಗೆ, ವನ್ಯ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಕಾಳಜಿಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ. ಹೀಗಾಗಿ ಸಸ್ಯ ಸಂರಕ್ಷಣೆಯು ವಿದ್ಯಾರ್ಥಿಗಳ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕೆಂದು ಅಭಿಪ್ರಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಇವರು ಮಾತನಾಡುತ್ತಾ ಕಳೆದೆರಡು ವರ್ಷಗಳಿಂದ ಸಾವಿರಕ್ಕೂ ಅಧಿಕ ಸಸಿಗಳನ್ನು ಎಕ್ಸಲೆಂಟ್ ಪರಿಸರದಲ್ಲಿ ನೆಡುವುದರ ಮೂಲಕ ಸಂಸ್ಥೆಯು ಪರಿಸರ ಸಂರಕ್ಷಣೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈ ಒಂದು ಪರಿಸರ ಸ್ನೇಹಿ ಕಾರ್ಯಕ್ರಮ ಮುಂಬರುವ ದಿನಗಳಲ್ಲೂ ಮುಂದುವರಿಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೇಣೂರು ವಲಯದ ಅರಣ್ಯ ಅಧಿಕಾರಿ ಶ್ರೀ ಪ್ರಶಾಂತ್ ಕುಮಾರ್ ಪೈ, ಲಯನ್ ಎಮ್ ದಿನೇಶ್ ಅಧಿಕಾರಿ, ಲಯನ್ ಕೆ.ಸಿ.ಪ್ರಭು, ಲಯನ್ ಎಮ್.ಸಿ.ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಲಯನ್ಸ್ ಕ್ಲಬ್ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ವಿಜಯ್ ವಿಷ್ಣು ಮಯ್ಯ, ರೀಜನ್ ಚೇರ್ ಪರ್ಸನ್ ಲಯನ್ ಸವಿತಾ ಶೆಟ್ಟಿ, ಮೂಡಬಿದ್ರೆ ಮುನ್ಸಿಪಾಲಿಟಿಯ ಪರಿಸರ ಇಂಜಿನಿಯರ್ ಶ್ರೀಮತಿ ಶಿಲ್ಪಾ, ಮುಖ್ಯೋಪಾಧ್ಯಾಯ ಶ್ರೀ ಗುರುಪ್ರಸಾದ್ ಶೆಟ್ಟಿ ಹಾಗೂ ಜೈನ್ ಮಿಲನ್ ಮೂಡಬಿದ್ರೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.