ಪುತ್ತೂರು : ಪತ್ರಕರ್ತ ಸಮಾಜಮುಖಿಯಾಗಿರಬೇಕು, ಬದ್ಧತೆಯಿಂದ ಕೂಡಿರಬೇಕು, ಸ್ವ ವಿಮರ್ಶೆಗೆ ಒಳಪಡುವ ಸಂಪ್ರದಾಯವನ್ನು ಸದಾ ಹೊಂದಿರಬೇಕು. ಹಾಗಿದ್ದರೆ ಮಾತ್ರ ಮಾಧ್ಯಮ ರಂಗವು ಜೀವಂತಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯ ಎಂದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ವಿಜಯವಾಣಿ ಕನ್ನಡ ದಿನ ಪತ್ರಿಕೆಯ ಸಹಭಾಗಿತ್ವದಲ್ಲಿ ಜುಲೈ 6ರಂದು ಆಯೋಜಿಸಲಾದ ಪತ್ರಿಕಾ ದಿನಾಚರಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಪತ್ರಿಕೆಗಳು ನೋಡುವ ಸಂಸ್ಕ್ರತಿಯನ್ನು ಬಿಟ್ಟು ಓದು ಸಂಸ್ಕೃತಿಯ ಕುರಿತು ಗಂಭೀರ ಚಿಂತನೆಯನ್ನು ಮಾಡುವಂತಾಗಬೇಕು. ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಬರಹಗಳು ಓದುಗ ಸ್ವೀಕರಿಸುವಂತಿರಬೇಕು. ಪತ್ರಿಕೋದ್ಯಮವು ತನ್ನ ಬೆಳವಣಿಗೆಯೊಂದಿಗೆ ಇತರರ ಬೆಳವಣಿಗೆಯ ಕುರಿತಾಗಿಯೂ ಚಿಂತನೆಯನ್ನು ನಡೆಸಬೇಕು. ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡವರಿಗೆ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ರೀತಿಯ ವಸ್ತು ವಿಷಯಗಳ ಕುರಿತು ಲೇಖನಗಳನ್ನು ಬರೆಯಲು ವಿಪುಲ ಅವಕಾಶವಿದೆ. ಪ್ರಸ್ತುತ ನವ ಮಾಧ್ಯಮಗಳ ಬಳಕೆ, ಮುಖ ಮತ್ತು ಮಾತುಗಳ ನಡುವೆ ಇರುವ ಪರಸ್ಪರ ಸಂಬಂಧವನ್ನು ನಶಿಸುವ ಸಾಧ್ಯತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದೊಂದಿಗೆ ಮಾಧ್ಯಮ ರಂಗವು ನಿರ್ಣಾಯಕ ಪಾತ್ರವಹಿಸುತ್ತದೆ. ದೇಶದ ಸರ್ವಾಂಗೀಣ ಏಳಿಗೆಯ ದೃಷ್ಟಿಯಲ್ಲಿ ಪತ್ರಿಕಾ ರಂಗವು ಮಹತ್ತರವಾದುದು ಎಂದು ಹೇಳಿ, ಶುಭ ಹಾರೈಸಿದರು.
ಬಳಿಕ ಪತ್ರಿಕೋದ್ಯಮದ ಕುರಿತು ಜರಗಿದ ಸಂವಾದದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ವೇದಿಕೆಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ತಾರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜಯವಾಣಿ ದಿನ ಪತ್ರಿಕೆಯ ವರದಿಗಾರರಾದ ಶ್ರವಣ್ ಕುಮಾರ್, ಲತೇಶ್, ಸುಕೇಶ್ ಮತ್ತು ದಿನೇಶ್ ಭಾಗವಹಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಶ್ಮಿ ವಿನಾಯಕ್ ಸಹಕರಿಸಿದರು.
ವಿಜಯವಾಣಿ ದಿನ ಪತ್ರಿಕೆಯ ಹಿರಿಯ ಉಪಸಂಪಾದಕ ಮೋಹನದಾಸ್ ಮರಕಡ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ದಿನಕರ ರಾವ್ ವಂದಿಸಿದರು. ವಿದ್ಯಾರ್ಥಿ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.