ಪುತ್ತೂರು : ಮುಖ್ಯಮಂತ್ರಿ ಸಿದ್ಧರಾಮಯ್ಯರವರ ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಭೇಟಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮಗಳನ್ನು ಜಿಲ್ಲಾ ಬಿಜೆಪಿ ಬಹಿಷ್ಕರಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಕಾಂಗ್ರೆಸ್ ನಡೆಸುತ್ತಿರುವ ಮುಸ್ಲೀಂ ಓಲೈಕೆಗೆ ಹಿಂದೂಗಳ ಬಲಿಯಾಗುತ್ತಿದೆ. ಕರ್ನಾಟಕ ಗುಂಡಾ ರಾಜ್ಯವಾಗಿ ಮಾರ್ಪಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರವೇ ಒಂದು ಕಡೆ ವಾಲಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಮುಖ್ಯಮತ್ರಿಗಳಿಗೆ ಜಿಲ್ಲೆ ನೆನಪಿಗೆ ಬರಲಿಲ್ಲ. ಕೇವಲ ಚುನಾವಣಾ ದೃಷ್ಟಿಯಿಂದ ಶಿಲಾನ್ಯಾಸ, ಉದ್ಘಾಟನೆಗಳನ್ನು ಮಾಡುತ್ತಿದ್ದಾರೆ. ಇಂತಹಾ ರಾಜಕೀಯ ಪ್ರೇರಿತ ಕಾರ್ಯಕ್ರಮಗಳಲ್ಲಿ ಬಿಜೆಪಿ ಭಾಗವಹಿಸುವುದಿಲ್ಲ. ಬಿಜೆಪಿಯ ಜನಪ್ರತಿನಿಧಿಗಳ ಸಹಿತ ದ.ಕ. ಜಿಪಂ ಅಧ್ಯಕ್ಷರು, ತಾಪಂ ಅಧ್ಯಕ್ಷರು ಸೇರಿದಂತೆ ಬಿಜೆಪಿ ಮೂಲಕ ಆಯ್ಕೆಯಾದ ಯಾವೊಬ್ಬ ಜನಪ್ರತಿನಿಧಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದರು.
ಬಿಜೆಪಿ ಸರಕಾರ ಹಣ ಮಂಜೂರು ಮಾಡಿದ್ದ ಪಶುವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡಿದರು. ಬಿಜೆಪಿ ಸರಕಾರ ಮಂಜೂರು ಮಾಡಿದ ಮಿನಿ ವಿಧಾನಸೌಧ ಉದ್ಘಾಟಿಸಿದರು. ಜಗದೀಶ್ ಶೆಟ್ಟರ್ ಅವರು ಮಾಡಿದ್ದ ಘೋಷಣೆಯನ್ನೇ ಪುನರಪಿ ಮಾಡಿದ್ದು ಬಿಟ್ಟರೆ ಕಡಬ ತಾಲೂಕು ಘೋಷಣೆ ಇನ್ನೂ ಅಧಿಕೃತವಾಗಿ ಮಾಡಿಲ್ಲ. ಪುತ್ತೂರು ಜಿಲ್ಲೆ ಘೋಷಣೆ ಮಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಈ ಮುಖ್ಯಮಂತ್ರಿಗಳ ಕೊಡುಗೆ “ಶೂನ್ಯ” ಎಂದರು. ಈಗಿನ ಸರಕಾರ 2,43,000 ಕೋಟಿ ಸಾಲ ಮಾಡಿದೆ. ಸಾಲದ್ದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿದ್ದ ಒಂದೂವರೆ ಸಾವಿರ ಕೋಟಿ ರೂ.ಗಳನ್ನು ಖಜಾನೆಗೆ ಸೇರಿಸಿಕೊಂಡಿದೆ. ಶವ ಸಂಸ್ಕಾರಕ್ಕೆ 5 ಸಾವಿರ ನೀಡುತ್ತಿದ್ದ ಹಣವನ್ನೂ ಈಗ ನೀಡುತ್ತಿಲ್ಲ. ಸಾಲ ಮನ್ನಾದ ಹಣ ಇನ್ನೂ ಸಹಕಾರಿ ಸಂಘಗಳಿಗೆ ಬಂದಿಲ್ಲ. ಅಂದರೆ ಸರಕಾರದ ಬೊಕ್ಕಸ ಖಾಲಿಯಾಗಿದೆಯೇ? ಪರಿಸ್ಥಿತಿ ಹೀಗಿರುವಾಗ ಚುನಾವಣೆ ಸಮೀಪಿಸಿದ ಸಂದರ್ಭ ಕೋಟಿಗಟ್ಟಲೆ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ವಿತ್ತ ಇಲಾಖೆ ಇದಕ್ಕೆಲ್ಲ ಅನುಮತಿ ಹೇಗೆ ನೀಡುತ್ತದೆ ಎಂದವರು ಪ್ರಶ್ನಿಸಿದರು.
ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಾಸಕರ ಫೋಟೋ ಹಾಕುವ ಮೂಲಕ ದುರುಪಯೋಗ ಮಾಡಿಕೊಳ್ಳಲಾಗಿದೆ. ಭಾನುವಾರದ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಕಳೆದ ಹತ್ತು ದಿನಗಳಿಂದ ಯಾವ ಅಧಿಕಾರಿಗಳೂ ಕೆಲಸ ಮಾಡುತ್ತಿಲ್ಲ. ಎಲ್ಲರೂ ಸಿಎಂ ಕಾರ್ಯಕ್ರಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.