ಪುತ್ತೂರು: ಪುತ್ತೂರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ‘ಸ್ವಚ್ಛ ಪುತ್ತೂರು’ ಕಲ್ಪನೆಯಲ್ಲಿ ಮುಂದಡಿಯಿಟ್ಟಿರುವ ಪುತ್ತೂರು ನಗರಸಭೆಗೆ 4.49 ಕೋಟಿ ರೂ.ಗಳಲ್ಲಿ ನೈರ್ಮಲ್ಯ ಘಟಕ ಸೇರಿದಂತೆ ಮನೆ ಮನೆ ಕಸ ಸಂಗ್ರಹಕ್ಕೆ 10 ನೂತನ ವಾಹನಗಳು ಮಂಜೂರಾಗಿದ್ದು, ಸೆಪ್ಟಂಬರ್ ಅಂತ್ಯದೊಳಗೆ ಈ ವಾಹನಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ.
ಸ್ವಚ್ಛ ಭಾರತ್ ಯೋಜನೆಯಡಿ ಪುತ್ತೂರು ನಗರಸಭೆಗೆ ಡಿಪಿಆರ್ ಮಂಜೂರಾತಿ ಲಭಿಸಿದ್ದು, ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಅನುದಾನ ಮಂಜೂರಾಗಿದೆ. ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಜೂರು ಮಾಡಲಾಯಿತು.
ಪ್ರಸ್ತುತ ಸ್ವಚ್ಛ ಭಾರತ್ ಯೋಜನೆಯಡಿ ಮಂಜೂರಾಗಿರುವ ಅನುದಾನವು ಮೂರು ಮೂಲಗಳಿಂದ ಶೇಕಡಾವಾರು ಅನುದಾನದಲ್ಲಿ ಲಭ್ಯವಾಗಿದೆ. ಕೇಂದ್ರ ಸರಕಾರದಿಂದ ಶೇ. 35 ಅಂದರೆ 1.57 ಕೋಟಿ ರೂ., ರಾಜ್ಯ ಸರಕಾರದ ಶೇ. 23.30 ಅಂದರೆ 1.04 ಕೋಟಿ ರೂ. ಹಾಗೂ ಸ್ಥಳೀಯ ಸಂಸ್ಥೆಯ (ಯುಎಲ್ಡಿ) ಶೇ. 41.70 ಅಂದರೆ 1.87 ಕೋಟಿ ರೂ. ಹೀಗೆ ಒಟ್ಟು 4.49.38 ಕೋಟಿ ರೂ. ಅನುದಾನ ಮಂಜೂರಾಗಿದೆ.
ಪುತ್ತೂರು ನಗರಸಭೆಯಲ್ಲಿ ಹಾಲಿ ಒಟ್ಟು 7 ವಾಹನಗಳು ಮನೆ ಮನೆ ಕಸ ಸಂಗ್ರಹದ ಕಾರ್ಯ ನಡೆಸುತ್ತಿವೆ. ಪುತ್ತೂರು ನಗರಸಭೆಯ ಮೂರು ಟಾಟಾ ಏಸ್ ಆಟೋಲಿಫ್ಟ್ ವಾಹನಗಳು ಹಾಗೂ ನಾಲ್ಕು ವಾಹನಗಳು ಹೊರಗುತ್ತಿಗೆಯಲ್ಲಿ ಕಾರ್ಯಾಚರಿಸುತ್ತಿವೆ. ಜತೆಗೆ ಒಂದು ನಗರಸಭೆಯ ಮಿನಿ ಟಿಪ್ಪರ್ ಕಾರ್ಯಾಚರಿಸುತ್ತಿದೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 10 ಬೊಲೆರೊ ಪಿಕ್‍ಅಪ್ ಹೊಸ ವಾಹನಗಳು ನಗರಸಭೆಗೆ ಬರಲಿದ್ದು, ಒಂದು ಮಿನಿ ಟಿಪ್ಪರ್ ಆಗಮಿಸಲಿದೆ.
ರೋಟರಿ ಕ್ಲಬ್, ಹಸುರು ದಳ ಹಾಗೂ ನಗರಸಭೆಯ ಸಹಯೋಗದಲ್ಲಿ ಸ್ವಚ್ಛ ಪುತ್ತೂರು ಅಭಿಯಾನ ಕೈಗೊಂಡಿದ್ದು, ಕಸ ಸಂಗ್ರಹಣೆಯ ಸಂದರ್ಭ ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ಕಸಗಳನ್ನು ಪ್ರತ್ಯೇಕ ಮಾಡಿ ನೀಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.